ಅಭಿವ್ಯಕ್ತಿ ಸ್ವಾತಂತ್ರ್ಯ ಬಗ್ಗೆ ರಾಜಿ ಇಲ್ಲ: ಉಪ ರಾಷ್ಟ್ರಪತಿ

Update: 2022-09-22 18:16 GMT

ಗುವಾಹತಿ, ಸೆ. 22: ಅಭಿವ್ಯಕ್ತಿ ಸ್ವಾತಂತ್ರ್ಯ ಭಾರತದ ಚರ್ಚೆ ರಹಿತ ಹಾಗೂ ರಾಜಿ ಮಾಡಿಕೊಳ್ಳಲಾಗದ ಸೊತ್ತು ಎಂದು ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಗುರುವಾರ ಹೇಳಿದ್ದಾರೆ. ಆದುದರಿಂದ ಯಾವುದೇ ಪಥ ಬದಲಾವಣೆ ದೇಶದ ಸಾರ್ವಭೌಮತ್ವ ಹಾಗೂ ಅಖಂಡತೆಯೊಂದಿಗೆ ರಾಜಿ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. ಇಲ್ಲಿ ‘ಲೋಕಮಂಥನ್-2022’ ಉದ್ಘಾಟಿಸಿ ಮಾತನಾಡಿದ ಅವರು, ಭಾರತದಲ್ಲಿ ಕಪಟ ಬುದ್ಧಿ ಜೀವಿಗಳ ವರ್ಗ ಹೆಚ್ಚುತ್ತಿದೆ. ಅವರಿಗೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ ಎಂದರು.

‘‘ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಚರ್ಚಾ ರಹಿತ ಹಾಗೂ ಅದರ ಬಗ್ಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ನಾವು ಅದರಿಂದ ವಿಮುಖರಾದರೆ, ದೇಶದ ಸಾರ್ವಭೌಮತೆ ಹಾಗೂ ಆರೋಗ್ಯಕರ ಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ’’ ಎಂದು ಧಂಕರ್ ಅವರು ಹೇಳಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗಕ್ಕೆ ಪ್ರಮುಖ ಪಾತ್ರವಿದೆ ಎಂದು ಹೇಳಿದ ಅವರು, ಇಂದು ವಿಷಯಗಳನ್ನು ವಿಧಾನ ಸಭೆಯ ಕಲಾಪದಲ್ಲಿ ಚರ್ಚಿಸುವ ಬದಲು ಬೀದಿಯಲ್ಲಿ ಚರ್ಚಿಸಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ನಕಲಿ ಬುದ್ದಿಜೀವಿಗಳಿಗೆ ಕಡಿವಾಣ ಹಾಕಬೇಕಾಗಿದೆ. ಮಾಧ್ಯಮಗಳು ಸೃಷ್ಟಿಸಿದ ಪ್ರಭಾವಳಿಯಲ್ಲಿ ಈ ವರ್ಗದ ಜನರು ಸಾರ್ವಜನಿಕ ಸ್ಥಳವನ್ನು ಆಕ್ರಮಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕೇ?  ಎಂದು ಅವರು ಪ್ರಶ್ನಿಸಿದರು.

ಬುದ್ಧಿಜೀವಿಗಳ ಪಾತ್ರ ತುಂಬಾ ಮುಖ್ಯವಾದುದು. ಆದುದರಿಂದ  ಅವರು ಪೂರ್ವಭಾವಿ ಸಂವಾದ, ಚರ್ಚೆಯಲ್ಲಿ ತೊಡಗಬೇಕು ಎಂದು ಅವರು ತಿಳಿಸಿದರು. 

‘‘ಭಾರತ ಎದುರಿಸುತ್ತಿರುವ ಸವಾಲುಗಳನ್ನು ಅವರು ಪ್ರತಿಬಿಂಬಿಸಬೇಕು. ಅವರು ಮುಂಚೂಣಿಯಲ್ಲಿ ನಿಲ್ಲಬೇಕು. ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಂಡು ಬುದ್ಧಿಜೀವಿಗಳು ಹೇಗೆ ಮೌನವಾಗಿರುತ್ತಾರೆ ಎಂಬುದನ್ನು ನನಗೆ ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ’’ ಎಂದು ಧಂಕರ್ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News