ಬಹುಪಾಲು ಭಾರತೀಯರು ವಾಟ್ಸ್ ಆ್ಯಪ್‌ನಲ್ಲಿ ಸ್ವೀಕರಿಸುವ ಸುದ್ದಿಗಳನ್ನು ನಂಬುತ್ತಾರೆ: ಅಧ್ಯಯನ ವರದಿ

Update: 2022-09-22 18:25 GMT

ಹೊಸದಿಲ್ಲಿ: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ರಾಯ್ಟರ್ಸ್ ಇನ್‌ಸ್ಟಿಟ್ಯೂಟ್ ಫಾರ್ ದಿ ಸ್ಟಡಿ ಆಫ್ ಜರ್ನಲಿಸಂ(Oxford University’s Reuters Institute for the Study of Journalism) ಗುರುವಾರ ಬಿಡುಗಡೆ ಮಾಡಿದ ಅಧ್ಯಯನವು 'ವಾಟ್ಸ್ ಆ್ಯಪ್‌(WhatsApp) ನಲ್ಲಿ ಸ್ವೀಕರಿಸುವ ಸುದ್ದಿಗಳನ್ನು ಬಹುಪಾಲು ಭಾರತೀಯ ನಾಗರಿಕರು ನಂಬುತ್ತಾರೆʼ ಎಂದು ಹೇಳಿದೆ.

ಭಾರತ, ಬ್ರೆಝಿಲ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ ನಾಗರಿಕರಿಗೆ ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೇಲಿನ ನಂಬಿಕೆಯ ಕುರಿತು ಪ್ರಶ್ನೆಗಳಿಗೆ ಬಂದ ಪ್ರತಿಕ್ರಿಯೆಗಳನ್ನು ಅಧ್ಯಯನವು ವಿಶ್ಲೇಷಿಸಿದೆ.

ಅಧ್ಯಯನದ ಪ್ರಕಾರ, ಭಾರತದಲ್ಲಿ ಪ್ರತಿಕ್ರಿಯಿಸಿದವರಲ್ಲಿ 77% ಜನರು ತಾವು ಸಾಮಾನ್ಯವಾಗಿ ಸುದ್ದಿ ಮಾಧ್ಯಮವನ್ನು ನಂಬುತ್ತಾರೆ ಎಂದು ಹೇಳಿದ್ದಾರೆ. ಅವರಲ್ಲಿ 54% ಅವರು ವಾಟ್ಸ್ ಆ್ಯಪ್‌ನಲ್ಲಿ, 51% ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ, 41% ಫೇಸ್‌ಬುಕ್‌ನಲ್ಲಿ, 27% ಇನ್‌ಸ್ಟಾಗ್ರಾಮ್‌ನಲ್ಲಿ, 25% ಟ್ವಿಟರ್‌ನಲ್ಲಿ ಮತ್ತು 15% ಟಿಕ್‌ಟಾಕ್‌ನಲ್ಲಿ ಸ್ವೀಕರಿಸುವ ಸುದ್ದಿಗಳನ್ನು ನಂಬುವುದಾಗಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಒಲವು ತೋರಿದವರಲ್ಲಿ 70% ರಷ್ಟು ಜನರು ವಾಟ್ಸ್ ಆ್ಯಪ್‌ನಲ್ಲಿನ ಸುದ್ದಿಗಳನ್ನು ನಂಬುವುದಾಗಿ ಹೇಳಿದ್ದಾರೆ ಎಂದು ಅಧ್ಯಯನವು ತೋರಿಸಿದೆ, ಆದರೆ ಮೋದಿ ಬಗ್ಗೆ ಪ್ರತಿಕೂಲವಾದ ಅಭಿಪ್ರಾಯಗಳನ್ನು ಹೊಂದಿರುವ 58% ರಷ್ಟು ಜನರು ವಾಟ್ಸಪ್‌ ಗಳಲ್ಲಿ ಬರುವುದನ್ನು ನಂಬುವುದಾಗಿ ಹೇಳಿದ್ದಾರೆ.

ಸುಮಾರು ಅರ್ಧದಷ್ಟು ಭಾರತೀಯರು (48%) ಅವರು ದಿನಕ್ಕೆ ಒಮ್ಮೆಯಾದರೂ ಆನ್‌ಲೈನ್‌ನಲ್ಲಿ ಸುದ್ದಿ ಪಡೆಯುತ್ತಾರೆ ಎಂದು ಹೇಳಿದ್ದಾರೆ, ಇದು ಅಧ್ಯಯನದ ಭಾಗವಾಗಿರುವ ನಾಲ್ಕು ದೇಶಗಳಲ್ಲಿ ಅತ್ಯಂತ ಕಡಿಮೆ ಅಂಕಿ ಅಂಶವಾಗಿದೆ. 34% ಭಾರತೀಯರು ಆನ್‌ಲೈನ್ ಯಾವ ಮೂಲಗಳಿಂದಲೂ ಎಂದಿಗೂ ಸುದ್ದಿ ಪಡೆಯುವುದಿಲ್ಲ ಎಂದು ಹೇಳಿದ್ದಾರೆ, ಇದು ಆ ನಾಲ್ಕು ದೇಶಗಳಲ್ಲಿ ಅತಿ ಹೆಚ್ಚು ಅಂಕಿ ಅಂಶವಾಗಿದೆ.

(ಸಮೀಕ್ಷೆಯಲ್ಲಿ ಭಾಗಿಯಾದ) ಬ್ರೆಝಿಲ್‌ನ 58% ಕ್ಕೆ ಹೋಲಿಸಿದರೆ ಭಾರತದಲ್ಲಿ 46% ಪ್ರತಿದಿನ ಸುದ್ದಿಗಳನ್ನು ಸ್ವೀಕರಿಸಲು WhatsApp ಅನ್ನು ಬಳಸುತ್ತಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News