ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ರಾಜಸ್ಥಾನ ಸಿಎಂ ಹುದ್ದೆ ತ್ಯಾಗಕ್ಕೆ ಗೆಹ್ಲೋಟ್ ಒಪ್ಪಿಗೆ:‌ ವರದಿ

Update: 2022-09-23 03:51 GMT

ಹೊಸದಿಲ್ಲಿ: ಅಶೋಕ್ ಗೆಹ್ಲೋಟ್ ಅವರು ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಇದಕ್ಕಾಗಿ ಅವರು ರಾಜಸ್ಥಾನ ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಗಾಂಧಿ ಕುಟುಂಬದ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಗೆಹ್ಲೋಟ್ ಅವರು, ಅಧ್ಯಕ್ಷ ಹುದ್ದೆಯ ಕಣಕ್ಕೆ ಇಳಿಯಲು ನಿರ್ಧರಿಸಿದ್ದು, ಹಾಲಿ ಹೊಂದಿರುವ ಸಿಎಂ ಹುದ್ದೆ ತ್ಯಜಿಸಲು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ timesofindia.com ವರದಿ ಮಾಡಿದೆ.

ಪಕ್ಷದ ಅಧ್ಯಕ್ಷರಾದರೂ ಸಿಎಂ ಆಗಿ ಮುಂದುವರಿಯುವುದಾಗಿ ಬುಧವಾರ ಗೆಹ್ಲೋಟ್ ಹೇಳಿಕೆ ನೀಡಿದ್ದರು. ಆದರೆ ಹೊಸ ಅಧ್ಯಕ್ಷರು ಕೂಡಾ "ಒಬ್ಬ ವ್ಯಕ್ತಿ ಒಂದು ಹುದ್ದೆ" ತತ್ವಕ್ಕೆ ಬದ್ಧರಾಗಲಿದ್ದಾರೆ ಎಂದು ರಾಹುಲ್‍ಗಾಂಧಿ ಘೋಷಿಸಿದ ಬೆನ್ನಲ್ಲೇ ತಮ್ಮ ನಿಲುವು ಬದಲಾಯಿಸಿದ್ದಾರೆ.

"ಉದಯಪುರದಲ್ಲಿ ನಾವು ನಿರ್ಧರಿಸಿರುವುದು ಕಾಂಗ್ರೆಸ್ ಬಗೆಗಿನ ನಮ್ಮ ಬದ್ಧತೆ. ಈ ಬದ್ಧತೆಯನ್ನು ಉಳಿಸಿಕೊಳ್ಳಲಾಗುತ್ತದೆ ಎನ್ನುವ ನಿರೀಕ್ಷೆ ನಮ್ಮದು" ಎಂದು ರಾಹುಲ್ ಹೇಳಿದ್ದರು. ತಕ್ಷಣವೇ ಈ ನಿರ್ಧಾರವನ್ನು "ಸರಿ" ಎಂದು ಗೆಹ್ಲೋಟ್ ಹೇಳಿದ್ದರು. ಜತೆಗೆ ಯಾವ ಕಾಂಗ್ರೆಸ್ ಅಧ್ಯಕ್ಷರು ಕೂಡಾ ಸಿಎಂ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕಾಂಗ್ರೆಸ್ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂಧನ ಮಿಸ್ತ್ರಿಯವರು ಗುರುವಾರ ಚುನಾವಣಾ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. 22 ವರ್ಷಗಳ ಬಳಿಕ ಪಕ್ಷಾಧ್ಯಕ್ಷ ಹುದ್ದೆಗೆ ಸ್ಪರ್ಧೆ ನಡೆಯುವ ನಿರೀಕ್ಷೆ ಇದೆ.

ಪಕ್ಷದ ಮುಖ್ಯಸ್ಥರ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುವ ಗೆಹ್ಲೋಟ್ ಅವರು ಕೇರಳ ಸಂಸದ ಶಶಿ ತರೂರ್ ವಿರುದ್ಧ ಸೆಣೆಸಲಿದ್ದಾರೆ. ಗೆಹ್ಲೋಟ್ ಅವರು ಗುರುವಾರ ಕೊಚ್ಚಿನ್‍ನಲ್ಲಿ ಕೆಲ ಗಂಟೆ ಕಾಲ ರಾಹುಲ್ ಅವರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬುಧವಾರ ಸಚಿನ್ ಪೈಲಟ್ ಈ ಯಾತ್ರೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News