ಪೂವಮ್ಮರ ಮುಂದಿನ ದಾರಿ ಕಠಿಣ?

Update: 2022-09-23 05:30 GMT

ಏಶ್ಯನ್ ಗೇಮ್ಸ್ ಮತ್ತು ಏಶ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಚಿನ್ನದ ಸಾಧನೆ ಮಾಡಿರುವ ಕರ್ನಾಟಕದ ಎಂ.ಆರ್. ಪೂವಮ್ಮ ಅವರನ್ನು ಡೋಪಿಂಗ್ ವಿರೋಧಿ ಮೇಲ್ಮನವಿ ಸಮಿತಿ (ಎಡಿಎಪಿ) ಎರಡು ವರ್ಷಗಳ ಕಾಲ ಅತ್ಲೆಟಿಕ್ಸ್‌ನಿಂದ ಅಮಾನತುಗೊಳಿಸಿದೆ. ಮುಂದಿನ ವರ್ಷದ ಏಶ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಮತ್ತು ಏಶ್ಯನ್ ಚಾಂಪಿಯನ್‌ಶಿಪ್‌ಗಳಿಗೆ ಭಾಗವಹಿಸುವ ಅವಕಾಶವನ್ನು ಪೂವಮ್ಮ ಕಳೆದುಕೊಂಡಿದ್ದಾರೆ.

 ಡೋಪಿಂಗ್ ವಿರೋಧಿ ಶಿಸ್ತಿನ ಸಮಿತಿ (ಎಡಿಡಿಪಿ) ಆದೇಶಿಸಿದ ಮೂರು ತಿಂಗಳ ಅಮಾನತು ಅವಧಿ ಪೂರ್ಣಗೊಳ್ಳುವ ಎರಡು ದಿನಗಳ ಮೊದಲು ಅಂದರೆ ಸೆಪ್ಟಂಬರ್ 16 ರಂದು ನೀಡಿದ ಆದೇಶದಲ್ಲಿ, ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (ನಾಡಾ) ಮಾಡಿದ ಮನವಿಯನ್ನು ಮೇಲ್ಮನವಿ ಸಮಿತಿಯು ಸ್ವೀಕರಿಸಿದೆ. ನಿಷೇಧಿತ ವಸ್ತು (ಮಿಥೈಲ್ ಹೆಕ್ಸಾನಿಯಮೈನ್) ತನ್ನ ದೇಹವನ್ನು ಹೇಗೆ ಪ್ರವೇಶಿಸಿತು ಎಂಬುದನ್ನು ದೃಢಪಡಿಸಲು ಕ್ರೀಡಾಪಟು ವಿಫಲರಾದರು ಎಂದು ಹೇಳಿದೆ. ಉತ್ಪನ್ನದ ಬ್ಯಾಚ್ ಸಂಖ್ಯೆ ಮತ್ತು ಉತ್ಪಾದನೆಯ ವಿವರಗಳನ್ನು ಒಳಗೊಂಡಿಲ್ಲದ ಕಾರಣ ಕಲುಷಿತಗೊಂಡ ಪೂರಕದ ಬಗ್ಗೆ ನೊಯ್ಡೆದ ಖಾಸಗಿ ಲ್ಯಾಬ್‌ನ ವರದಿಯನ್ನು ಅವಲಂಬಿಸಲಾಗುವುದಿಲ್ಲ ಎಂದು ಸಮಿತಿಯು ತೀರ್ಪು ನೀಡಿದೆ. ಇದರಿಂದಾಗಿ ಪೂವಮ್ಮ ಸಂಕಷ್ಟ ಅನುಭವಿಸುವಂತಾಗಿದೆ. ಹಿಂದೆ ಕನ್ನಡತಿ ಅಶ್ವಿನಿ ಅಕ್ಕುಂಜೆ ನಿಷೇಧಿತ ದ್ರವ್ಯ ಸೇವಿಸಿದ ಆರೋಪದಲ್ಲಿ ಅಮಾನತುಗೊಂಡಿದ್ದರು. ನಿಷೇಧ ಸಜೆ ಅನುಭವಿಸಿ ವಾಪಸಾಗಿದ್ದರೂ, ಹಿಂದಿನಂತೆ ಮಿಂಚುವಲ್ಲಿ ವಿಫಲರಾದರು. ಪೂವಮ್ಮ 18 ಫೆಬ್ರವರಿ 2021ರಂದು ಪಟಿಯಾಲದಲ್ಲಿ ಪರೀಕ್ಷೆಗೊಳಗಾದರು. ಅವರು ನೀಡಿರುವ ಮಾದರಿಯ ಫಲಿತಾಂಶ ಮುಂದೆ ಪ್ರಕಟಗೊಂಡಾಗ, ಅವರು ಸೇವಿಸಿರುವ ಆಹಾರದಲ್ಲಿ ನಿಷೇಧಿತ ದ್ರವ್ಯ ಮಿಥೈಲ್ ಹೆಕ್ಸಾನಿಯಮೈನ್ ಅಂಶ ಇರುವುದು ಬೆಳಕಿಗೆ ಬಂದಿತ್ತು. ತಾನು ನಿಷೇಧಿತ ದ್ರವ್ಯ ಸೇವಿಸಿಲ್ಲ. ಆದರೆ ಬೆಡ್‌ಟೈಮ್ ಲ್ಯಾಟೆ ಎಂಬ ಆಯುರ್ವೇದ ಉತ್ಪನ್ನವನ್ನು ಸೇವಿಸಿರುವ ವಿಚಾರವನ್ನು ಪೂವಮ್ಮ ಒಪ್ಪಿಕೊಂಡಿದ್ದಾರೆ. ಆ ಬಳಿಕ ಶಿಸ್ತು ಸಮಿತಿಯು ಅವರ ಮೇಲೆ ಮೂರು ತಿಂಗಳ ಅಮಾನತು ವಿಧಿಸಿತ್ತು. ಆದರೆ ಪೂವಮ್ಮ ಅವರು ತೆಗೆದುಕೊಳ್ಳುತ್ತಿರುವ ಪೂರಕ ಆಹಾರದ ಮೂಲಕ ನಿಷೇಧಿತ ವಸ್ತುವು ತನ್ನ ದೇಹವನ್ನು ಪ್ರವೇಶಿಸಿದೆ ಎಂದು ವಾದಿಸಿದ್ದರು. ಆದರೆ ಅವರಿಗೆ ಇದಕ್ಕೆ ಸಂಬಂಧಿಸಿ ಯಾವುದೇ ವೈಜ್ಞಾನಿಕ ಪುರಾವೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. 2013ರಿಂದ ಭಾರತೀಯ ಮಹಿಳಾ 4 400 ಮೀ. ರಿಲೇ ತಂಡದ ಬೆನ್ನೆಲುಬು ಆಗಿರುವ ಪೂವಮ್ಮ 2014 ಮತ್ತು 2018ರ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ್ನ ಪಡೆದ ಭಾರತ ತಂಡದ ಸದಸ್ಯೆಯಾಗಿದ್ದರು. 2018ರಲ್ಲಿ ಮಿಶ್ರ ತಂಡವು ಚಿನ್ನ ಪಡೆದಿತ್ತು. 2014ರಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ವೈಯಕ್ತಿಕ ಕಂಚಿನ ಪದಕ ಗೆದ್ದಿದ್ದರು. ಏಶ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ 2013ರಲ್ಲಿ ಅವರ ರಿಲೇ ತಂಡ ಚಿನ್ನ ಜಯಿಸಿತ್ತು. 2013, 2015, 2019ರಲ್ಲಿ ಅವರ ತಂಡವು ಬೆಳ್ಳಿಯನ್ನು ಜಯಿಸಿತ್ತು.

 32 ವರ್ಷದ ಅತ್ಲೀಟ್ ಪೂವಮ್ಮ 2013, 2015 ಮತ್ತು 2019ರ ಏಶ್ಯನ್ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದಲ್ಲಿ ಬೆಳ್ಳಿ ಪಡೆದುಕೊಂಡಿದ್ದರು. 2019ರಲ್ಲಿ ಅವರ ಮಿಕ್ಸೆಡ್ ತಂಡ ಬೆಳ್ಳಿ ಪಡೆದಿತ್ತು. 2016ರ ಸೌತ್ ಏಶ್ಯನ್ ಗೇಮ್ಸ್‌ನಲ್ಲಿ ಸ್ವರ್ಣ ಸಾಧನೆ ಮಾಡಿದ್ದರು.

 ಕಳೆದ ವರ್ಷ ಓಟಗಾರ್ತಿ ಹಿಮಾ ದಾಸ್ ಅವರು ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರಾಗಿ ಸೇರ್ಪಡೆಗೊಂಡಾಗ ಪೂವಮ್ಮ ಅವರು ತನ್ನನ್ನು ರಾಜ್ಯ ಸರಕಾರ ಗುರುತಿಸದಿರುವ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ತಾನು 2019ರಲ್ಲಿ ಏಶ್ಯನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದ ಆನಂತರ ಹಿಂದಿರುಗಿದಾಗ, ತನ್ನನ್ನು ಸ್ವಾಗತಿಸಲು ಯಾರೂ ಇರಲಿಲ್ಲ ಮತ್ತು ಸರಕಾರದಿಂದ ಯಾರೂ ತಮಗೆ ಶುಭ ಹಾರೈಸಲಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದ್ದರು.

 ಆದರೆ ತಾನು ಸಂಪೂರ್ಣವಾಗಿ ಸರಕಾರವನ್ನು ದೂಷಿಸುತ್ತಿಲ್ಲ. 2014 ಮತ್ತು 2018ರಲ್ಲಿ ಏಶ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಾಗ ಸ್ವಾಗತ ನೀಡಿದ್ದನ್ನು ಮತ್ತು ನಗದು ಬಹುಮಾನವನ್ನು ಸಹ ನೀಡಿರುವುದನ್ನು ನೆನಪಿಸಿದ್ದರು. ಆದರೆ ರಾಜ್ಯ ಸರಕಾರದ ನಿಲುವಿನ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಇತರ ರಾಜ್ಯಗಳ ಕ್ರೀಡಾಪಟುಗಳು ಪಡೆಯುವ ಗೌರವ, ಮನ್ನಣೆ ಮತ್ತು ಬಹುಮಾನ ಕರ್ನಾಟಕದಲ್ಲಿ ದೊರೆಯುತ್ತಿಲ್ಲ ಎಂದು ಹೇಳಿದ್ದರು. 2015 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದ ಪೂವಮ್ಮ ಟೋಕಿಯೊ ಒಲಿಂಪಿಕ್ಸ್‌ಗೆ ಕೆಲವೇ ವಾರಗಳ ಮೊದಲು ಪಟಿಯಾಲದಲ್ಲಿ ನಡೆದ ರಿಲೇ ಟ್ರಯಲ್ಸ್‌ನಿಂದ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಅವರ ವಿರುದ್ಧ ಡೋಪಿಂಗ್ ಕಳಂಕದ ಬಗ್ಗೆ ಊಹಾಪೋಹಗಳಿದ್ದವು. ರಾಷ್ಟ್ರೀಯ ಶಿಬಿರವನ್ನು ತೊರೆದಿರುವ ವಿಚಾರ ಅನೇಕರಿಗೆ ಅಚ್ಚರಿಯಾಗಿತ್ತು. ಮಾರ್ಚ್ 13 ಮತ್ತು 23ರಂದು ತಿರುವನಂತಪುರದಲ್ಲಿ ನಡೆದ ಇಂಡಿಯನ್ ಗ್ರಾನ್ ಪ್ರಿ 1 ಮತ್ತು ಮತ್ತು 2ರಲ್ಲಿ ಕ್ರಮವಾಗಿ 53.39 ಸೆಕೆಂಡ್ ಮತ್ತು 52.44 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕಗಳನ್ನು ಗೆದ್ದಿದ್ದರು. ಇದು ಅವರ ವರ್ಷದ ಅತ್ಯುತ್ತಮ ಪ್ರದರ್ಶನವಾಗಿತ್ತು. ಅವರು ಎಪ್ರಿಲ್‌ನಲ್ಲಿ ಮಲಪ್ಪುರಂನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ 52.70 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಗೆದ್ದಿದ್ದರು. ಆದರೆ ಇದೀಗ ಅವರ ಈ ಸಾಧನೆಗೆ ಕಳಂಕ ಆವರಿಸಿದೆ. ಆಕೆ ಎಲ್ಲಾ ಮೂರು ಪದಕಗಳನ್ನು ಕಳೆದುಕೊಳ್ಳುವಂತಾಗಿದೆ.

ಈಗ ಅವರಿಗೆ ಎರಡು ವರ್ಷಗಳ ಅಮಾನತು ಸಜೆ ದೃಢಪಟ್ಟಿದೆ. ಕಳೆದ 10 ವರ್ಷಗಳಿಂದ ಪೂವಮ್ಮ ಓಟದ ರಂಗದಲ್ಲಿದ್ದಾರೆ. ಸದ್ದಿಲ್ಲದೆ ಹಲವು ಪದಕಗಳನ್ನು ಬಾಚಿಕೊಂಡಿದ್ದ ಕೊಡಗು ಮೂಲದ ಪೂವಮ್ಮ ಶಿಕ್ಷಣ ಪೂರೈಸಿದ್ದು ಮಂಗಳೂರಿನಲ್ಲಿ. ಕಳೆದ ವರ್ಷದ ಕೊನೆಯಲ್ಲಿ (ಡಿ.29) ಅವರು ತನ್ನ ಗೆಳೆಯ ಕೇರಳದ ಅತ್ಲೀಟ್ ಜಿತೆನ್ ಪಾಲ್ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿರಿಸಿದ್ದರು. 32ರ ಹರೆಯದ ಪೂವಮ್ಮ ಅವರ ವಿರುದ್ಧದ ಎರಡು ವರ್ಷಗಳ ಅಮಾನತು ಸಜೆ ಮುಗಿಯುವ ಹೊತ್ತಿಗೆ ಅವರಿಗೆ 34 ವರ್ಷವಾಗುತ್ತದೆ. ಅವರ ಮುಂದಿನ ಕ್ರೀಡಾ ಹಾದಿ ಕಠಿಣ. ಅವರು ಕಳಂಕಿತ ಆರೋಪದಿಂದ ಮುಕ್ತಗೊಂಡು ಮತ್ತೆ ಓಟಕ್ಕೆ ವಾಪಸಾಗಲಿ ಎನ್ನುವುದು ಕ್ರೀಡಾಭಿಮಾನಿಗಳ ಹಾರೈಕೆಯಾಗಿದೆ.

Writer - ಇಬ್ರಾಹಿಂ ಅಡ್ಕಸ್ಥಳ

contributor

Editor - ಇಬ್ರಾಹಿಂ ಅಡ್ಕಸ್ಥಳ

contributor

Similar News