ಜಯ್ ಶಾ ಯಾರು, ಅವರು ಎಷ್ಟು ಶತಕ ಗಳಿಸಿದ್ದಾರೆ: ವಂಶ ರಾಜಕಾರಣ ಪ್ರಶ್ನಿಸಿದ ಬಿಜೆಪಿಗೆ ಡಿಎಂಕೆ ತಿರುಗೇಟು

Update: 2022-09-23 09:49 GMT

ಚೆನ್ನೈ: ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರು ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ವಿರುದ್ಧ ಕಟುವಾದ ವಾಗ್ದಾಳಿ ನಡೆಸಿದ್ದು, ವಂಶ ರಾಜಕಾರಣವನ್ನು ಟೀಕಿಸಿದ್ದಾರೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಿರುವ ಡಿಎಂಕೆ ಬಿಸಿಸಿಐ ಅಧಿಕಾರಿ ಜಯ್ ಶಾ ಎಷ್ಟು ಶತಕ ಸಿಡಿಸಿದ್ದರು ಎಂದು ಪ್ರಶ್ನಿಸಿದೆ.

ಹೊಸ ಶಿಕ್ಷಣ ನೀತಿ ಹಾಗೂ  ನೀಟ್‌ಗೆ ರಾಜ್ಯದ ವಿರೋಧಕ್ಕಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಮೌನವಾಗಿ ಗುರಿಪಡಿಸಿದ ನಡ್ಡಾ, "ಅಶಿಕ್ಷಿತರು ವ್ಯವಹಾರಗಳ ಚುಕ್ಕಾಣಿ ಹಿಡಿದಾಗ ಹೀಗಾಗುತ್ತದೆ" ಎಂದು ಹೇಳಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ಶೈಕ್ಷಣಿಕ ಅರ್ಹತೆ ಕೇಳುವ ಮಟ್ಟಕ್ಕೆ ತಾನು ಇಳಿಯುವುದಿಲ್ಲ ಎಂದು ಆಡಳಿತಾರೂಢ ಡಿಎಂಕೆ ತಿರುಗೇಟು ನೀಡಿದೆ. ಆದಾಗ್ಯೂ,  ವಂಶ ರಾಜಕೀಯದ ವಿಷಯದ ಬಗ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದೆ.

"ಜಯ್ ಶಾ ಯಾರು ಹಾಗೂ  ಅವರು ಎಷ್ಟು ಶತಕಗಳನ್ನು ಹೊಡೆದಿದ್ದಾರೆ?" ಎಂದು ಡಿಎಂಕೆ ವಕ್ತಾರ ಎ. ಸರವಣ ಪ್ರಶ್ನಿಸಿದ್ದಾರೆ.

ಜಯ್ ಶಾ ಅವರು ಬಿಜೆಪಿ ನಾಯಕ ಹಾಗೂ  ಗೃಹ ಸಚಿವ ಅಮಿತ್ ಶಾ ಅವರ ಪುತ್ರ. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಅಥವಾ ಭಾರತದ ಶ್ರೀಮಂತ ಕ್ರೀಡಾ ಸಂಸ್ಥೆಯಾದ BCCI ಯ ಗೌರವ ಕಾರ್ಯದರ್ಶಿಯಾಗಿದ್ದಾರೆ.

"ಬಿಜೆಪಿ ದ್ವೇಷ ಹಾಗೂ  ವಿಭಜನೆಯ ಯಜಮಾನ. ಇದು ಅದರ ನಿಜವಾದ ಮುಖ. ಯುವಜನರಿಗೆ ಉದ್ಯೋಗ ನೀಡುವಲ್ಲಿ ಅದು ವಿಫಲವಾಗಿದೆ. ತಮಿಳುನಾಡಿನ ಜನರು ಬುದ್ಧಿವಂತರು.  2024 ರಲ್ಲಿ ಅವರನ್ನು ತಿರಸ್ಕರಿಸುತ್ತಾರೆ" ಎಂದು ಡಿಎಂಕೆಯನ್ನು "ದ್ವೇಷ ಹಾಗೂ ವಿಭಜನೆ" ಹರಡುವ ಪಕ್ಷ ಎಂದು ಕರೆದ ನಡ್ಡಾಗೆ ಡಿಎಂಕೆ ವಕ್ತಾರರು ಪ್ರತ್ಯುತ್ತರ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News