ನಿರೂಪಕಿ ನಾವಿಕಾ ಕುಮಾರ್ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ ಐಆರ್ ದಿಲ್ಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಆದೇಶ

Update: 2022-09-23 09:11 GMT
Photo: | Facebook/NavikaKumarTimesNow

ಹೊಸದಿಲ್ಲಿ: ಪ್ರವಾದಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾಗೆ ಸಂಬಂಧಿಸಿದ ಪ್ರಕರಣದಲ್ಲಿ ‘ಟೈಮ್ಸ್ ನೌ’ (Times Now) ನಿರೂಪಕಿ ನಾವಿಕಾ ಕುಮಾರ್ (Navika Kumar) ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಥಮ ಮಾಹಿತಿ ವರದಿಗಳನ್ನು(ಎಫ್ ಐಆರ್) ದಿಲ್ಲಿಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ (Supreme Court) ಶುಕ್ರವಾರ ಆದೇಶಿಸಿದೆ ಎಂದು Live Law ವರದಿ ಮಾಡಿದೆ.

ನೂಪುರ್ ಶರ್ಮಾ (Nupur Sharma) ಮೇ 26 ರಂದು ಟೈಮ್ಸ್ ನೌ ಚರ್ಚೆಯ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಚರ್ಚಾ ಕಾರ್ಯಕ್ರಮವನ್ನು  ನವಿಕಾ ಕುಮಾರ್ ನಿರ್ವಹಿಸುತ್ತಿದ್ದರು. ಕಾರ್ಯಕ್ರಮ ಪ್ರಸಾರದ ಒಂದು ದಿನದ ನಂತರ, ಸುದ್ದಿ ವಾಹಿನಿಯು ಶರ್ಮಾ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿತ್ತು.

ಧಾರ್ಮಿಕ ಭಾವನೆಗಳನ್ನು ಕೆರಳಿಸಿದ್ದಕ್ಕಾಗಿ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ದಿಲ್ಲಿ ಹಾಗೂ ಜಮ್ಮು-ಕಾಶ್ಮೀರದಲ್ಲಿ ಕುಮಾರ್ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.

ತನ್ನ ವಿರುದ್ಧದ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಅಥವಾ ಅವುಗಳನ್ನು ಒಟ್ಟಿಗೆ ಸೇರಿಸಿ ಒಂದು ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಟಿವಿ ನಿರೂಪಕಿ  ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ಶುಕ್ರವಾರ  ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ಭವಿಷ್ಯದಲ್ಲಿ ನಿರೂಪಕಿಯ ವಿರುದ್ಧ ದಾಖಲಾಗುವ ಯಾವುದೇ ಎಫ್‌ಐಆರ್‌ಗಳಿಗೂ ನ್ಯಾಯಾಲಯದ ನಿರ್ದೇಶನ ಅನ್ವಯಿಸುತ್ತದೆ ಎಂದು ಹೇಳಿದೆ ಎಂದು Bar and Bench ವರದಿ ಮಾಡಿದೆ.

ಎಂಟು ವಾರಗಳವರೆಗೆ ಕುಮಾರ್ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಹೇಳಿದೆ.

"ಅರ್ಜಿದಾರರು ಪ್ರಮುಖ ಎಫ್‌ಐಆರ್ ರದ್ದುಗೊಳಿಸುವುದಕ್ಕಾಗಿ (ದಿಲ್ಲಿ) ಹೈಕೋರ್ಟ್‌ಗೆ ತೆರಳಲು ಸ್ವಾತಂತ್ರ್ಯ ಹೊಂದಿದ್ದಾರೆ" ಎಂದು ಪೀಠ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News