ಭ್ರಷ್ಟಾಚಾರ ಪ್ರಕರಣ: ಯಡಿಯೂರಪ್ಪ ವಿರುದ್ಧ ತನಿಖೆಗೆ ಸುಪ್ರೀಂಕೋರ್ಟ್ ತಡೆ

Update: 2022-09-23 08:46 GMT

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ ಐಆರ್ ನ ತನಿಖೆಗೆ ಸುಪ್ರೀಂಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ತನಿಖೆಗೆ ಅನುಮತಿ ನೀಡಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಯಡಿಯೂರಪ್ಪ ಸಲ್ಲಿಸಿದ್ದ  ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್  ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ನ್ಯಾಯಪೀಠವು ದೂರುದಾರರಾದ ಟಿ.ಜೆ. ಅಬ್ರಾಹಂಗೆ ನೋಟಿಸ್ ನೀಡಿದೆ.

ಯಡಿಯೂರಪ್ಪ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಹಾಗೂ ಸಿದ್ಧಾರ್ಥ್ ದವೆ ಅವರು ಜನಪ್ರತಿನಿಧಿಗಳ ವಿರುದ್ಧ ಎಫ್ ಐಆರ್ ದಾಖಲಿಸುವ  ಮೊದಲು ಸಕ್ಷಮ ಪ್ರಾಧಕಾರದಿಂದ ಪೂರ್ನಾನುಮತಿ ಪಡೆಯಬೇಕೆಂಬ ನಿಯಮವನ್ನು ಹೈಕೋರ್ಟ್ ನಿರ್ಲಕ್ಷಿಸಿದೆ ಎಂದರು.

ಅಪರಾಧ ದಂಡ ಸಂಹಿತೆಯ ಸೆಕ್ಷನ್ 156(3) ಅನ್ವಯ ದಾಖಲಾದ ದೂರುಗಳಿಗೆ ಪೂರ್ವಾನುಮತಿಯ ನಿಯಮ ಅನ್ವಯವಾಗುವುದಿಲ್ಲ ಎದು ಕಾನೂನಿನ ಇತ್ತೀಚಿನ ತಿದ್ದುಪಡಿ ತಿಳಿಸುತ್ತದೆ ಎಂದು ಅಬ್ರಾಹಂ ಪರ ವಕೀಲರು ವಾದಿಸಿದರು. ಆಗ ನ್ಯಾಯಪೀಠ  ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News