ಆತ್ರಾಡಿ ಗ್ರಾಪಂ ಉಪಾಧ್ಯಕ್ಷಗೆ ನಿರೀಕ್ಷಣಾ ಜಾಮೀನು

Update: 2022-09-23 16:26 GMT

ಉಡುಪಿ, ಸೆ.23: ಇತ್ತೀಚೆಗೆ ಆತ್ರಾಡಿ ಗ್ರಾಪಂ ವತಿಯಿಂದ ರಸ್ತೆ ಕಾಂಕ್ರೀಟಿಕರಣ ಕೆಲಸ ನಡೆಯುತ್ತಿದ್ದ ಸಮಯ ಸ್ಥಳೀಯ ನಿವಾಸಿಗಳು ಹಾಗೂ ಪಂಚಾಯತು ಉಪಾಧ್ಯಕ್ಷರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಹೊಕೈಯ ವೀಡಿಯೋ ಅಂತರ್ಜಾಲದಲ್ಲಿ ಬಾರೀ ವೈರಲ್ ಆಗಿದ್ದು, ಹಿರಿಯಡ್ಕ ಆರಕ್ಷಕ ಠಾಣೆಯಲ್ಲಿ ಪಂಚಾಯತಿನ ಉಪಾಧ್ಯಕ್ಷ ರತ್ನಾಕರ ಶೆಟ್ಟಿ ಪರೀಕ ಹಾಗೂ ಇತರ ಇಬ್ಬರ ಮೇಲೆ ಎಫ್‌ಐಆರ್ ಕೂಡಾ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ರತ್ನಾಕರ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಿ ಉಡುಪಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಸೆ.5ರಂದು ಆತ್ರಾಡಿ ಗ್ರಾಪಂ ವತಿಯಿಂದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ವೇಳೆ ಆತ್ರಾಡಿ ಗ್ರಾಪಂ ಉಪಾಧ್ಯಕ್ಷ್ಯ ರತ್ನಾಕರ ಶೆಟ್ಟಿ, ಸ್ಥಳೀಯ ನಿವಾಸಿಗಳಾದ ಚಂದ್ರಹಾಸ ಶೆಟ್ಟಿ ಮತ್ತು ಸಂತೋಷ ಪೂಜಾರಿಯವರು ಸ್ಥಳೀಯ ನಿವಾಸಿ ಆರತಿ ಸುರೇಶ್ ಶೆಟ್ಟಿ ಅವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಹಿರಿಯಡ್ಕ ಆರಕ್ಷಕ ಠಾಣೆಯಲ್ಲಿ ದೂರು ದಾಖಲಾಗಿತ್ತು. ರಸ್ತೆ ಕಾಮಗಾರಿಯ ಸಮಯದಲ್ಲಿ ನಡೆದ ಘಟನೆಯ ವಿಡೀಯೋ ವಾಟ್ಸಾಪ್‌ನಲ್ಲಿ ವೈರಲ್ ಆಗಿ ರಾಜ್ಯದ ಜನರ ಗಮನ ಸೆಳೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯತು ಉಪಾಧ್ಯಕ್ಷ್ಯ ಪರೀಕ ರತ್ನಾಕರ ಶೆಟ್ಟಿ ಅವರು ಟಿವಿ ವಾಹಿನಿಯೊಂದಕ್ಕೆ ಸಮಜಾಯಿಷಿ ನೀಡಿರುವ ವೀಡಿಯೋ ಸಹ ವೈರಲ್ ಆಗಿತ್ತು. ಇದೀಗ ರತ್ನಾಕರ ಶೆಟ್ಟಿ ಅವರಿಗೆ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿ ಆದೇಶ ಹೊರಡಿಸಿದೆ. ರತ್ನಾಕರ ಶೆಟ್ಟಿ ಅವರ ಪರವಾಗಿ ಉಡುಪಿ ಖ್ಯಾತ ನ್ಯಾಯವಾದಿ ಅತ್ರಾಡಿ ಪೃಥ್ವಿರಾಜ ಹೆಗ್ಡೆ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News