ಚೀತಾಗಳ ಆಗಮನದಿಂದ ಭಾರತದಲ್ಲಿ ಹೊಸ ಉತ್ಸಾಹ: ಪ್ರಧಾನಿ ಮೋದಿ

Update: 2022-09-23 17:30 GMT

ಹೊಸದಿಲ್ಲಿ, ಸೆ. 23: ಕೆಲವು ದಿನಗಳ ಹಿಂದೆ ಮಧ್ಯಪ್ರದೇಶಕ್ಕೆ ಚೀತಾಗಳ ಆಗಮನದಿಂದ ದೇಶಕ್ಕೆ ಹೊಸ ಉತ್ಸಾಹ ಮರಳಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಇಂದು ಭಾರತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯಾಗಿದೆ. ಅಲ್ಲದೆ, ಅದು ತನ್ನ ಪರಿಸರವನ್ನು ನಿರಂತರ ಬಲಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಗುಜರಾತ್‌ನ ನರ್ಮದಾದಲ್ಲಿ ಪರಿಸರ ಸಚಿವರ ರಾಷ್ಟ್ರೀಯ ಸಮಾವೇಶವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.

ನಮ್ಮ ದೇಶದಲ್ಲಿ ಹಲವು ವರ್ಷಗಳಿಂದ ಗಿರ್ ಸಿಂಹ, ಹುಲಿ, ಆನೆ, ಒಂದು ಕೊಂಬಿನ ಖಡ್ಗಮೃಗ ಹಾಗೂ ಚಿರತೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು. ‘‘ನಮ್ಮ ಅರಣ್ಯ ಪ್ರದೇಶ ಹೆಚ್ಚಿದೆ. ಆರ್ದ್ರ ಭೂಮಿ ಕೂಡ ಹೆಚ್ಚುತ್ತಿದೆ. ಇಂದಿನ ನವ ಭಾರತ ಹೊಸ ಆಲೋಚನೆ ಹಾಗೂ ಹೊಸ ನಿಲುವಿನತ್ತ ಚಲಿಸುತ್ತಿದೆ’’ ಎಂದು ಅವರು ತಿಳಿಸಿದರು.

ಪರಿಸರದ ಬಗ್ಗೆ ಮಾತನಾಡಿದ ಅವರು, 2070ರ ವರೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯ ಗುರಿಯನ್ನು ಭಾರತ ಹೊಂದಿದೆ ಎಂದರು. ಈಗ ದೇಶದ ಗಮನ ಹಸಿರು ಪ್ರಗತಿಯತ್ತ, ಹಸಿರು ಉದ್ಯೋಗತ್ತ ಇದೆ. ಈ ಎಲ್ಲಾ ಗುರಿಗಳನ್ನು ಸಾಧಿಸಲು ಪ್ರತಿ ರಾಜ್ಯದಲ್ಲಿರುವ ಪರಿಸರ ಸಚಿವಾಲಯಗಳ ಪಾತ್ರ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ ರಾಜ್ಯಗಳಲ್ಲಿ ಸಾಧ್ಯವಾದಷ್ಟು ಆವರ್ತನ ಆರ್ಥಿಕತೆಯನ್ನು ಉತ್ತೇಜಿಸಲು ಎಲ್ಲ ಪರಿಸರ ಸಚಿವರನ್ನು ಆಗ್ರಹಿಸುವಂತೆ ಅವರು ಹೇಳಿದ್ದಾರೆ. ಇದು ಘನ ತ್ಯಾಜ್ಯ ನಿರ್ವಹಣೆ ಹಾಗೂ ಏಕಬಳಕೆಯ ಪ್ಲಾಸ್ಟಿಕ್‌ನಿಂದ ಮುಕ್ತಿ ಎಂಬ ನಮ್ಮ ಅಭಿಯಾನಕ್ಕೆ ಬಲ ನೀಡಲಿದೆ ಎಂದು ಅವರು ತಿಳಿಸಿದರು.

‘ನಗರ ನಕ್ಸಲರಿಗೆ ರಾಜಕೀಯ ಬೆಂಬಲ’:

ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎಂದು ಅಭಿಯಾನ ನಡೆಸುವ ಮೂಲಕ ಗುಜರಾತ್‌ನ ನರ್ಮದಾ ನದಿಗೆ ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣವನ್ನು ಸ್ಥಗಿತಗೊಳಿಸಿದ ನಗರ ನಕ್ಸಲರು ಹಾಗೂ ಅಭಿವೃದ್ಧಿ ವಿರೋಧಿ ಶಕ್ತಿಗಳಿಗೆ ರಾಜಕೀಯದ ಬೆಂಬಲ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ಈ ಅಣೆಕಟ್ಟು ನಿರ್ಮಾಣದಲ್ಲಿ ವಿಳಂಬವಾಗಿರುವುದರಿಂದ ದೊಡ್ಡ ಮೊತ್ತದ ಹಣ ವ್ಯರ್ಥವಾಗಿದೆ. ಈಗ ಅಣೆಕಟ್ಟು ಪೂರ್ಣಗೊಂಡ ಬಳಿಕ ಅವರ ಪ್ರತಿಪಾದನೆಗಳು ಎಷ್ಟು ಸಂಶಯಾಸ್ಪದ ಎಂದು ನೀವು ತುಂಬಾ ಚೆನ್ನಾಗಿ ನಿರ್ಣಯಿಸಬಹುದು ಎಂದು ಪ್ರಧಾನಿ ಅವರು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News