ವಿಧಾನ ಸಭೆ ಚುನಾವಣೆ ಪ್ರಚಾರಕ್ಕೆ ಬಿಜೆಪಿಯಿಂದ 340 ಕೋ. ರೂ.ಗೂ ಅಧಿಕ ವೆಚ್ಚ: ವರದಿ

Update: 2022-09-23 17:53 GMT

ಹೊಸದಿಲ್ಲಿ, ಸೆ. 23: ಈ ವರ್ಷ ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಹಾಗೂ ಪಂಜಾಬ್ ವಿಧಾನ ಸಭೆ ಚುನಾವಣೆಯ ಪ್ರಚಾರಕ್ಕೆ 340 ಕೊ.ರೂ.ಗೂ ಅಧಿಕ ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ತನ್ನ ಚುನಾವಣೆ ವೆಚ್ಚದ ವರದಿಯಲ್ಲಿ ತಿಳಿಸಿದೆ.

ಇದು ಈ ರಾಜ್ಯಗಳಲ್ಲಿ 2017ರಲ್ಲಿ ವೆಚ್ಚ ಮಾಡಿದ 218.26 ಕೋ. ರೂ.ಗಿಂತ ಸುಮಾರು ಶೇ. 58 ಹೆಚ್ಚು ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ವಿಶ್ಲೇಷಣೆ ಹೇಳಿದೆ.

ಇದೇ ಸಂದರ್ಭ ಈ 5 ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ 194 ಕೋ. ರೂ. ವೆಚ್ಚ ಮಾಡಲಾಗಿದೆ ಎಂದು ಕಾಂಗ್ರೆಸ್ ತನ್ನ ವೆಚ್ಚ ವರದಿಯಲ್ಲಿ ಹೇಳಿದೆ. ಇದು 5 ವರ್ಷಗಳ ಹಿಂದೆ ಚುನಾವಣಾ ಪ್ರಚಾರಕ್ಕೆ ವೆಚ್ಚ ಮಾಡಿದ  108.14 ಕೋ.ರೂ.ಗಿಂತ ಶೇ. 80 ಅಧಿಕ ಎಂದು ಅದು ತಿಳಿಸಿದೆ.

ವಿಧಾನ ಸಭೆ ಚುನಾವಣೆ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಸಲಾಗಿತ್ತು. ಉತ್ತರಪ್ರದೇಶ, ಗೋವಾ, ಮಣಿಪುರ ಹಾಗೂ ಉತ್ತರಾಖಂಡದಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ವಿಜಯಿಯಾಗಿತ್ತು. ಐದು ರಾಜ್ಯಗಳ ಒಟ್ಟು 690 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 55 ಸ್ಥಾನಗಳಲ್ಲಿ ವಿಜಯಿಯಾಗಿತ್ತು.

ಉತ್ತರಪ್ರದೇಶದಲ್ಲಿ ಗರಿಷ್ಠ ಮೊತ್ತ (221.32 ಕೋ.ರೂ.)  ವೆಚ್ಚ ಮಾಡಲಾಗಿದೆ ಎಂದು ಬಿಜೆಪಿ ಚುನಾವಣಾ ವೆಚ್ಚದ ವರದಿ ತಿಳಿಸಿದೆ.  2017ಕ್ಕೆ ಹೋಲಿಸಿದರೆ ಇಲ್ಲಿ ಕಡಿಮೆ ಸ್ಥಾನಗಳಲ್ಲಿ ಅಧಿಕಾರಕ್ಕೆರಲು ಮಾತ್ರ ಬಿಜೆಪಿಗೆ ಸಾಧ್ಯವಾಯಿತು.  

ಉತ್ತರಾಖಂಡ ವಿಧಾನ ಸಭಾ ಚುನಾವಣೆಯ ಬಿಜೆಪಿಯ ಪ್ರಚಾರ ವೆಚ್ಚ 43.67 ಕೋ. ರೂ.. ಪಂಜಾಬ್‌ನಲ್ಲಿ 36 ಕೋ. ರೂ. ವೆಚ್ಚ ಮಾಡಿದೆ.  ಇದು 2017ರ ವಿಧಾನ ಸಭೆ ಚುನಾವಣೆಯಲ್ಲಿ ಮಾಡಿದ ಪ್ರಚಾರ ವೆಚ್ಚ 7.43 ಕೋ.ರೂ.ಗಿಂತ ಸುಮಾರು ಐದು ಪಟ್ಟು ಅಧಿಕ.

ಗೋವಾದಲ್ಲಿ ಈ ವರ್ಷ ಚುನಾವಣೆ ಪ್ರಚಾರಕ್ಕೆ ಬಿಜೆಪಿ 19 ಕೋ.ರೂ. ವೆಚ್ಚ ಮಾಡಿದೆ. ಮಣಿಪುರದಲ್ಲಿ 23.51 ಕೋ.ರೂ. ವೆಚ್ಚ ಮಾಡಿದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ.

ಈ ನಡುವೆ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದ ವೇದಿಕೆಗಳು ಹಾಗೂ ಇತರ ವೇದಿಕೆಗಳಲ್ಲಿ ವರ್ಚುವಲ್ ಅಭಿಯಾನಕ್ಕೆ 15.67 ಕೋ.ರೂ. ವೆಚ್ಚ ಮಾಡಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News