ಇರಾನ್ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ತುರ್ತು ತನಿಖೆ ನಡೆಸಲಿ: ಆಮ್ನೆಸ್ಟಿ

Update: 2022-09-23 18:42 GMT

ಲಂಡನ್, ಸೆ.23: ಇರಾನ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ನೇತೃತ್ವದಲ್ಲಿ ಸ್ವತಂತ್ರ ತನಿಖೆ ತುರ್ತಾಗಿ ನಡೆಯಬೇಕು ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಜಾಗತಿಕ ಮುಖಂಡರನ್ನು ಆಗ್ರಹಿಸಿದೆ. ಮಹ್ಸಾ ಅಮಿನಿ ಎಂಬ ಯುವತಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ ಆರಂಭವಾಗಿದ್ದು ಪತಿಭಟನೆಯನ್ನು ಹತ್ತಿಕ್ಕಲು ಇರಾನ್‌ನ ಭದ್ರತಾ ಪಡೆ ಬಲಪ್ರಯೋಗ ನಡೆಸಿದೆ. ಮಹ್ಸಾ ಅಮಿನಿಯ ಸಾವಿನ ಬಳಿಕ ಹೊರಹೊಮ್ಮಿದ ಜಾಗತಿಕ ಕ್ರೋಧ ಮತ್ತು ಸಹಾನುಭೂತಿಯ ಜತೆಗೆ, ಇರಾನ್‌ನ ಅಧಿಕಾರಿಗಳು ಜೈಲುಗೋಡೆಯ ಹಿಂದೆ ನಡೆಸುತ್ತಿರುವ ವ್ಯಾಪಕ ಚಿತ್ರಹಿಂಸೆ, ಕಾನೂನುಬಾಹಿರ ಮರಣದಂಡನೆ ಮತ್ತು ಇತರ ಕಾನೂನು ಬಾಹಿರ ಕೃತ್ಯಗಳನ್ನು ಜಾಗತಿಕ ಸಮುದಾಯ ಗಮನಿಸಬೇಕಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಉಪ ನಿರ್ದೇಶಕಿ ಡಯಾನಾ ಎಲ್ತಾವಿ ಹೇಳಿದ್ದಾರೆ.

ಇರಾನ್ ಭದ್ರತಾ ಪಡೆಗಳನ್ನು ಹೊಣೆಗಾರರನ್ನಾಗಿಸದಿದ್ದರೆ ಅವರು ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರು, ಕೈದಿಗಳನ್ನು ಗಾಯಗೊಳಿಸುವುದು ಮತ್ತು ಹತ್ಯೆ ಮಾಡುವುದನ್ನು ನಿರ್ಭಯದಿಂದ ಮುಂದುವರಿಸಬಹುದು. ಆದ್ದರಿಂದ ಅಂತರಾಷ್ಟ್ರೀಯ ಕಾನೂನಿಡಿ ಅಪರಾಧಕ್ಕೆ ಕಾರಣವಾದವರು ಶಿಕ್ಷೆಗೆ ಗುರಿಯಾಗಲೇ ಬೇಕು ಎಂಬ ಕಠಿಣ ಸಂದೇಶವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿ ಇರಾನ್ ಆಡಳಿತಕ್ಕೆ ರವಾನಿಸಬೇಕು ಎಂದವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News