ಭಟ್ಕಳ: ರಸ್ತೆ ಅಪಘಾತಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿ ಬಲಿ, ನಾಲ್ವರಿಗೆ ಗಾಯ

Update: 2022-09-24 09:51 GMT

ಭಟ್ಕಳ, ಸೆ.24: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಮೃತಪಟ್ಟು, ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಶುಕ್ರವಾರ ತಡರಾತ್ರಿ ಭಟ್ಕಳ ಸಮೀಪದ ಮೂಡಭಟ್ಕಳ ಬೈಪಾಸ್ ರಾ.ಹೆ.66ರಲ್ಲಿ ಸಂಭವಿಸಿದೆ.

ಕಾರು ಚಲಾಯಿಸುತ್ತಿದ್ದ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸಯನ್ಸ್ ಇಂಜಿನಿಯರಿಂಗ್ ದ್ವಿತೀಯ ವರ್ಷದ ವಿದ್ಯಾರ್ಥಿ, ರಂಗಿನಕಟ್ಟೆ ನಿವಾಸಿ ಮುಹಮ್ಮದ್ ಉನೈಸ್ ಖತೀಬ್ (20) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಹಮ್ಮದ್ ಫುರ್ಖಾನ್ ಗಂಗಾವಳಿ, ಮುಹಮ್ಮದ್ ಸುಹೈಲ್ ಗೋಲಿವಾಲೆ, ಸೈಯದ್ ಇಸ್ಮಾಯೀಲ್ ಲಂಕಾ ಮತ್ತು ಅಬ್ದುರ್ರಹ್ಮಾನ್ ಎಂಬವರು ಗಾಯಗೊಂಡಿದ್ದಾರೆ. ಈ ಪೈಕಿ ಮುಹಮ್ಮದ್ ಫುರ್ಖಾನ್ ಗಂಗಾವಳಿ, ಮುಹಮ್ಮದ್ ಸುಹೈಲ್ ಗೋಲಿವಾಲೆ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಇವರೆಲ್ಲರೂ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

ಈ ಐವರು ವಿದ್ಯಾರ್ಥಿಗಳು ಗೆಳೆಯರಾಗಿದ್ದು, ಕಳೆದ ರಾತ್ರಿ ಪರೀಕ್ಷೆಯ ಸಿದ್ಧತೆ ಮುಗಿಸಿ ಟೀ ಕುಡಿಯಲೆಂದು ಕಾರಿನಲ್ಲಿ ಒಟ್ಟಿಗೆ ಹೊರಟಿದ್ದರು. ಶಿರೂರು ಚೆಕ್ ಪೋಸ್ಟ್ ಬಳಿಯ ಟಿ ಸ್ಟಾಲ್‌ ವೊಂದರಲ್ಲಿ ಚಹಾ ಕುಡಿದು ಭಟ್ಕಳದತ್ತ ವಾಪಸ್ ಆಗುತ್ತಿದ್ದ ವೇಳೆ ಮೂಡಭಟ್ಕಳ ಬೈಪಾಸ್ ರಾ.ಹೆ.66ರಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಢಿಕ್ಕಿಯಾಗಿ ಉರುಳಿಬಿದ್ದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಚಕ್ರಗಳು ಕಳಚಿಕೊಂಡಿವೆ.

ಮುಹಮ್ಮದ್ ಉನೈಸ್ ಅವರ ಅಂತ್ಯ ಸಂಸ್ಕಾರವು ಶನಿವಾರ ಮಧ್ಯಾಹ್ನ ನವಾಯತ್ ಕಾಲನಿ ತಂಝೀಮ್  ಜುಮಾ ಮಸೀದಿಯ ದಫನ ಭೂಮಿಯಲ್ಲಿ ನೆರವೇರಿತು.

 ಅಪಘಾತದ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News