×
Ad

ಚೀನಾ ಕುರಿತು ವ್ಯಾಪಕ ವದಂತಿ: ಕ್ಷಿಪ್ರ ಕ್ರಾಂತಿಯಲ್ಲಿ ಪದಚ್ಯುತರಾದರೇ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ?

Update: 2022-09-25 09:28 IST

ಹೊಸದಿಲ್ಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಗೃಹಬಂಧನ ವಿಧಿಸಲಾಗಿದೆ ಎಂಬ ವದಂತಿಗಳು ಇಂಟರ್‌ನೆಟ್‍ ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‍ಎ) ಮುಖ್ಯಸ್ಥ ಹುದ್ದೆಯಿಂದ ಅವರನ್ನು ಪದಚ್ಯುತಗೊಳಿಸಿ ಗೃಹಬಂಧನದಲ್ಲಿ ಇಡಲಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಚೀನಾದ ಆಡಳಿತಾರೂಢ ಚೀನಿ ಕಮ್ಯುನಿಸ್ಟ್ ಪಾರ್ಟಿ ಅಥವಾ ಸರ್ಕಾರಿ ಮಾಧ್ಯಮದಲ್ಲಿ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ದೊರಕಿಲ್ಲ.

ಇತ್ತೀಚೆಗೆ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಕೋ ಅಪರೇಷನ್ ಆರ್ಗನೈಸೇಷನ್ (ಎಸ್‍ಸಿಓ) ಶೃಂಗಸಭೆಯಲ್ಲಿ ಕ್ಸಿ ಜಿನ್ ಪಿಂಗ್ ಭಾಗವಹಿಸಿದ್ದರು ಹಾಗೂ ಹಲವು ದೇಶಗಳ ಮುಖಂಡರ ಜತೆ ಚರ್ಚೆ ನಡೆಸಿದ್ದರು. ಭಾರತ ಹಾಗೂ ಚೀನಾ ನಡುವೆ 2020ರಲ್ಲಿ ಗಡಿ ಸಂಘರ್ಷ ಉಲ್ಬಣಿಸಿದ ಬಳಿಕ ಮೊದಲ ಬಾರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿ ಮಾಡಿದ್ದರು.

ಜಿನ್ ಪಿಂಗ್ ಅವರ ಗೃಹಬಂಧನದ ಬಗ್ಗೆ ಟ್ವಿಟ್ಟರ್‌ ನಲ್ಲಿ ಹಲವು ಮಂದಿ ಪೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆದಿದ್ದು, ಪಿಎಲ್‍ಎ ವಾಹನಗಳು ಈಗಾಗಲೇ ರಾಜಧಾನಿ ಬೀಜಿಂಗ್‍ನತ್ತ ಮುಖ ಮಾಡಿವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.

"ಪಿಎಲ್‍ಎ ಮಿಲಿಟರಿ ವಾಹನಗಳು ಸೆಪ್ಟೆಂಬರ್ 22ರಂದೇ ಬೀಜಿಂಗ್‍ನತ್ತ ಮುಖ ಮಾಡಿವೆ. ಬೀಜಿಂಗ್ ಬಳಿಯ ಹೂನ್ಲಿ ಕೌಂಟಿಯಿಂದ ಹೊರಟು ಹೆಬ್ಬಿ ಪ್ರಾಂತ್ಯದ ಝಂಗಿಯೋಕ್ ನಗರದವರೆಗೆ 80 ಕಿಲೋಮೀಟರ್‌ ನಲ್ಲಿ ಮೆರವಣಿಗೆ ನಡೆದಿದೆ. ಪಿಎಲ್‍ಎ ಮುಖ್ಯಸ್ಥ ಹುದ್ದೆಯಿಂದ ಜಿನ್ ಪಿಂಗ್ ಅವರನ್ನು ಪದಚ್ಯುತಗೊಳಿಸಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂಬ ವರದಿಗಳಿವೆ" ಎನ್ನುವುದಾಗಿ ಜೆನ್ನಿಫರ್ ಜೆಂಗ್ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News