ಗೋವು ಭಾರತದ ಆರ್ಥಿಕತೆಯ ಅಡಿಪಾಯ: ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌

Update: 2022-09-25 14:11 GMT
ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ (PTI) 

ಲಕ್ನೋ: ನೈಸರ್ಗಿಕ ಕೃಷಿಗೆ ಬದಲಾದ ಕಾರಣ ನಷ್ಟ ಅನುಭವಿಸುತ್ತಿರುವ ರೈತರಿಗೆ ಸರ್ಕಾರದಿಂದ ನೆರವು ನೀಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್(UP CM Yogi Adityanath) ಶನಿವಾರ ಭರವಸೆ ನೀಡಿದ್ದಾರೆ.

'ರಾಜ್ಯ ಮಟ್ಟದ ಹಸು ಆಧಾರಿತ ನೈಸರ್ಗಿಕ ಕೃಷಿ ಕಾರ್ಯಾಗಾರ-2022'ದಲ್ಲಿ ಮಾತನಾಡಿದ ಸಿಎಂ ಆದಿತ್ಯನಾಥ್, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು, ಗೋವು (Cow) ಭಾರತದ ಆರ್ಥಿಕತೆಯ (Indian economy) ಅಡಿಪಾಯವಾಗಿದೆ ಎಂದು ಹೇಳಿದರು.

ಯುರೋಪ್ ನಲ್ಲಿ ಕೈಗಾರಿಕಾ ಕ್ರಾಂತಿ ನಡೆದು ಭಾರತ ಬ್ರಿಟಿಷರ ಗುಲಾಮಗಿರಿಗೆ ಒಳಗಾದಾಗ, ದೇಶದಲ್ಲಿ ಸಾಂಪ್ರದಾಯಿಕ ಕೃಷಿ ಅಧೋಗತಿಗೆ ಇಳಿದು, ಅಲ್ಲಿಂದ ಭಾರತದ ಸೋಲು ಆರಂಭವಾಯಿತು ಎಂದು ಸಿಎಂ ಹೇಳಿದರು.

ಸ್ವಾತಂತ್ರ್ಯಾ ನಂತರ ದೇಶವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಯಾಗಿದ್ದರೂ, ಸಾಂಪ್ರದಾಯಿಕ ಕೃಷಿಯಿಂದ ದೂರ ಸರಿಯುವುದರ ಋಣಾತ್ಮಕ ಪರಿಣಾಮಗಳಿಂದ ಪಾರಾಗಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

"ಜನತಾ ದರ್ಶನದ ಸಮಯದಲ್ಲಿ ಜನರು ನನ್ನೊಂದಿಗೆ ಸಂವಾದ ನಡೆಸುವಾಗ, ನಾವು ಸ್ವೀಕರಿಸುವ ಪ್ರತಿ 100 ಅರ್ಜಿಗಳಲ್ಲಿ 10 ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಣಕಾಸಿನ ನೆರವು ಕೇಳಿ ಬಂದಿರುತ್ತದೆ. ಅವರ ಅನಾರೋಗ್ಯದ ಕಾರಣ ಏನು ಎಂದು ತಿಳಿಯಲು ನಾನು ಆಸಕ್ತಿ ಹೊಂದಿದ್ದೇನೆ. ಅದಕ್ಕೆ ಅವರ ಆಹಾರವು ಒಂದು ಮುಖ್ಯ ಅಂಶ. ಯುವಜನಾಂಗ ಕಾಯಿಲೆಗಳಿಂದ ಪೀಡಿತರಾಗುತ್ತಿದ್ದಾರೆ, ಇದು ಚಿಂತಿಸಬೇಕಾದ ವಿಷಯ" ಎಂದು ಅವರು ಆದಿತ್ಯನಾಥ್ ಹೇಳಿದರು.

ಅನಾರೋಗ್ಯ ತಡೆಗಟ್ಟಲು ಭಾರತೀಯ ತಳಿಯ ಹಸುಗಳನ್ನು ಉಳಿಸಬೇಕು ಮತ್ತು ಹಸು ಆಧಾರಿತ ಕೃಷಿ ಮೂಲಕ ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸಲು ಸಹಕರಿಸಬೇಕು ಎಂದು ಸಿಎಂ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಬಜೆಟ್‌ನಲ್ಲಿ ಗೋವು ಆಧಾರಿತ ನೈಸರ್ಗಿಕ ಕೃಷಿಯನ್ನು ಅಳವಡಿಸಿದ್ದಾರೆ ಎಂದು ಹೇಳಿದರು.  

"2020 ರಲ್ಲಿ, ಗಂಗಾ ನದಿಯ ದಡದಲ್ಲಿರುವ ಪ್ರದೇಶಗಳಲ್ಲಿ ನೈಸರ್ಗಿಕ ಕೃಷಿ ಮತ್ತು ಹಸು ಆಧಾರಿತ ನರ್ಸರಿಗಳನ್ನು ಉತ್ತೇಜಿಸುವುದು ಮತ್ತು ತೋಟಗಾರಿಕಾ ಬೆಳೆಗಳನ್ನು ವಿಸ್ತರಿಸುವುದು, ನದಿಯ ನಿರಂತರ ಹರಿವು ಮತ್ತು ಅದರ ಶುದ್ಧತೆಯನ್ನು ಕಾಪಾಡುವುದು ನಮ್ಮ ಗುರಿಯಾಗಿದೆ. 27 ಜಿಲ್ಲೆಗಳಲ್ಲಿ ಹಸು ಆಧಾರಿತ ಬೇಸಾಯವನ್ನು ಅಭ್ಯಾಸ ಮಾಡಲಾಗುವುದು ಮತ್ತು ಅಂತಹ ಕೃಷಿಗಾಗಿ 62,200 ಹೆಕ್ಟೇರ್ ಅನ್ನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಮುಂದಿನ ತಿಂಗಳುಗಳಲ್ಲಿ, ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್‌ಗೆ ಅನುಗುಣವಾಗಿ ಸರ್ಕಾರವು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.  

“ನೈಸರ್ಗಿಕ ಕೃಷಿ ಪ್ರಮಾಣೀಕರಣವನ್ನು ಹೆಚ್ಚಿಸಲು ನಾಲ್ಕು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. 89 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಪ್ರಮಾಣೀಕರಣವನ್ನು ಹೆಚ್ಚಿಸುವ ಮೂಲಕ ಉತ್ತಮ ಮಾರುಕಟ್ಟೆಯನ್ನು ಒದಗಿಸಲಾಗುವುದು, ಪ್ರತಿ ಮಾರುಕಟ್ಟೆಯಲ್ಲಿ ನೈಸರ್ಗಿಕವಾಗಿ ತಯಾರಿಸಿದ ಆಹಾರ, ಹಣ್ಣುಗಳು ಮತ್ತು ತರಕಾರಿಗಳನ್ನು ಮಾರಾಟ ಮಾಡಲು ವಿಶೇಷ ವ್ಯವಸ್ಥೆ ಮಾಡಬೇಕು,'' ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News