ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳ ಒಗ್ಗಟ್ಟಿಗೆ ನಿತೀಶ್ ಕುಮಾರ್ ಕರೆ

Update: 2022-09-25 15:39 GMT

ಫತೇಹಾಬಾದ್ (ಹರ್ಯಾಣ),ಸೆ.25: ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳು ಸೇರಿದಂತೆ ಎಲ್ಲ ಪ್ರತಿಪಕ್ಷಗಳು ಒಗ್ಗೂಡುವಂತೆ ರವಿವಾರ ಇಲ್ಲಿ ಕರೆ ನೀಡಿದ ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ ಅವರು,ಪ್ರತಿಪಕ್ಷಗಳ ಈ ಪ್ರಮುಖ ಮೈತ್ರಿಕೂಟವು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಕೆಟ್ಟ ಸೋಲನ್ನು ಖಚಿತಪಡಿಸಲಿದೆ ಎಂದರು.

 ಮಾಜಿ ಉಪಪ್ರಧಾನಿ ದೇವಿಲಾಲ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ ಐಎನ್‌ಎಲ್‌ಡಿ ರ್ಯಾಲಿಯಲ್ಲಿ ಮಾತನಾಡಿದ ಅವರು,ಎಲ್ಲ ಬಿಜೆಪಿಯೇತರ ಪಕ್ಷಗಳು ಒಗ್ಗೂಡಿದರೆ ದೇಶವನ್ನು ನಾಶಗೊಳಿಸುತ್ತಿರುವವರನ್ನು ಕಿತ್ತೊಗೆಯಬಹುದು ಎಂದು ಹೇಳಿದರು. ಹಿಂದುಗಳು ಮತ್ತು ಮುಸ್ಲಿಮರ ನಡುವೆ ಯಾವುದೇ ಕಲಹವಿಲ್ಲ ಎಂದ ಅವರು,ಬಿಜೆಪಿಯು ಗಲಭೆಗಳನ್ನು ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

‘ರಾಷ್ಟ್ರೀಯ ಮಟ್ಟದಲ್ಲಿ ನಾವು ಒಂದುಗೂಡುವ ಅಗತ್ಯವಿದೆ ಎನ್ನುವುದು ನನ್ನ ಏಕೈಕ ಬಯಕೆ. ನಾವು ಹೆಚ್ಚೆಚ್ಚು ಪಕ್ಷಗಳನ್ನು ಒಂದುಗೂಡಿಸುವ ಅಗತ್ಯವಿದೆ ’ಎಂದು ನಿತೀಶ ಹೇಳಿದರು.

ಎನ್‌ಡಿಎ ಈಗ ಅಸ್ತಿತ್ವದಲ್ಲಿಲ್ಲ,ಬಿಪಿಯ ಮಿತ್ರಪಕ್ಷಗಳು ಅದರಿಂದ ಹೊರಬಂದಿವೆ. ಜೆಡಿಯು,ಅಕಾಲಿ ದಳ ಮತ್ತು ಶಿವಸೇನೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಅನ್ನು ತೊರೆದಿವೆ ಎಂದು ಆರ್‌ಜೆಡಿ ನಾಯಕ ಹಾಗೂ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ ಅವರು ಹೇಳಿದರು.

ಬಿಜೆಪಿಯು ಸುಳ್ಳು ಹೇಳಿಕೆಗಳು ಮತ್ತು ಭರವಸೆಗಳನ್ನು ನೀಡುತ್ತಿದೆ ಎಂದು ಹೇಳಿದ ಅವರು,ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚಿಗೆ ಬಿಹಾರದ ಪೂರ್ಣಿಯಾದಲ್ಲಿನ ಸಾರ್ವಜನಿಕ ಸಭೆಯಲ್ಲಿ ಅಲ್ಲಿಯ ವಿಮಾನ ನಿಲ್ದಾಣದ ಬಗ್ಗೆ ಮಾತನಾಡಿದ್ದರು,ಅಸಲಿಗೆ ಅಲ್ಲಿ ವಿಮಾನ ನಿಲ್ದಾಣವೇ ಇಲ್ಲ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗದ ಬಲ ಪ್ರದರ್ಶನಕ್ಕಾಗಿ ಹರ್ಯಾಣದ ಇಂಡಿಯನ್ ನ್ಯಾಷನಲ್ ಲೋಕದಳವು ಆಯೋಜಿಸಿದ್ದ ದೇವಿಲಾಲ ಸಮ್ಮಾನ ರ್ಯಾಲಿಯಲ್ಲಿ ಪ್ರತಿಪಕ್ಷಗಳ ಹಲವಾರು ಹಿರಿಯ ನಾಯಕರು ಭಾಗವಹಿಸಿದ್ದರು. ಕಾಂಗ್ರೆಸ್ ಪಕ್ಷದ ಗೈರುಹಾಜರಿ ಎದ್ದು ಕಾಣುತ್ತಿತ್ತು.

ಕಾಂಗ್ರೆಸ್ ಮತ್ತು ಐಎನ್‌ಎಲ್‌ಡಿ ಹರ್ಯಾಣದಲ್ಲಿ ಬದ್ಧವೈರಿಗಳಾಗಿವೆ. ಆದಾಗ್ಯೂ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ತಾನು ಈಗ ಕಾಂಗ್ರೆಸ್ ಜೊತೆಗೂ ಕೈ ಜೋಡಿಸಲು ಸಿದ್ಧವಿದ್ದೇನೆ ಎಂದು ಐಎನ್‌ಎಲ್‌ಡಿ ಹೇಳಿದೆ.

 ಹರ್ಯಾಣದ ಅತ್ಯಂತ ಪ್ರಬಲ ಪಕ್ಷಗಳಲ್ಲಿ ಒಂದಾಗಿದ್ದ ಐಎನ್‌ಎಲ್‌ಡಿ ವಿಭಜನೆಯ ಬಳಿಕ ಈಗ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದು,ಹರ್ಯಾಣ ವಿಧಾನಸಭೆಯಲ್ಲಿ ಏಕೈಕ ಶಾಸಕನನ್ನು ಹೊಂದಿದೆ. ಪಕ್ಷದ ಪೋಷಕ ಓಂ ಪ್ರಕಾಶ ಚೌತಾಲಾ ಅವರ ಹಿರಿಯ ಪುತ್ರಅಜಯ ಚೌತಾಲಾ ಅವರು ತನ್ನದೇ ಆದ ಜನನಾಯಕ ಜನತಾ ಪಕ್ಷವನ್ನು ಸ್ಥಾಪಿಸಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ.

ಶೀಘ್ರವೇ ತಾನು ಹಾಗೂ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ ಯಾದವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದೇವೆ ಎಂದು ನಿತೀಶ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News