ವಿದ್ಯುತ್ ದರ ಏರಿಕೆಗೆ ಕಾಂಗ್ರೆಸ್ ಖಂಡನೆ

Update: 2022-09-25 15:44 GMT

ಉಡುಪಿ, ಸೆ.25: ಈಗಾಗಲೇ  ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ರಾಜ್ಯ ಸರಕಾರ ಏಕಾಏಕಿ ವಿದ್ಯುತ್  ದರ ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಈ ಹಿಂದೆ ಎಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದರೂ ಐದೇ ತಿಂಗಳಲ್ಲಿ ಮತ್ತೊಮ್ಮೆ ಏರಿಸಿರುವುದು  ಸರಕಾರದ ಜನ ವಿರೋಧಿ ನೀತಿಗೆ ಸ್ವಷ್ಟ ಉದಾಹರಣೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸರಕಾರದ ಧೋರಣೆಯನ್ನು ಖಂಡಿಸಿದೆ.

ಇದರಿಂದ ಕೇವಲ 9 ತಿಂಗಳ ಅವಧಿಯಲ್ಲಿ ವಿದ್ಯುತ್ ಗ್ರಾಹಕರಿಗೆ ಪ್ರತೀ ಯೂನಿಟ್ ಮೇಲೆ ಒಂದು ರೂ.ವರೆಗೆ ಏರಿಕೆ ಮಾಡಿದಂತಾಗಿದೆ. ಸರಕಾರದ ಈ ನಿರ್ಧಾರದಿಂದ ಗೃಹ ಬಳಕೆದಾರ ಪ್ರತಿ 100 ಯೂನಿಟ್ ವಿದ್ಯುತ್ ಬಳಸಿದರೆ 43 ರೂ. ಹೆಚ್ಚುವರಿಯಾಗಿ  ನೀಡಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೇಳಿಕೆಯಲ್ಲಿ ಟೀಕಿಸಿದೆ. 

ಅದೇ ರೀತಿ ಉದ್ಯಮಿಯೊಬ್ಬ  1 ಲಕ್ಷ ಯುನಿಟ್ ಬಳಸುತ್ತಿದ್ದರೆ  4300 ರೂ ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ಈಗಾಗಲೇ ಉದ್ದಿಮೆಗಳು ಸಾರಿಗೆ ವೆಚ್ಚ ಹಾಗೂ  ಕಚ್ಟಾವಸ್ತುಗಳ ಬೆಲೆ ಎರಿಕೆಯಿಂದ ತತ್ತರಿಸಿರುವಾಗ  ಸರಕಾರ ಉದ್ದಿಮೆದಾರರಿಗೂ ಹೆಚ್ಚಿನ ಹೊರೆ ಹೊರಿಸಿ ಉದ್ಯಮವನ್ನೂ  ನಿರ್ಲಕ್ಷಿಸಿದೆ. 

ಸರಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದೆ  ಪೆಟ್ರೋಲ್, ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯೊಂದಿಗೆ ಜನ ಸಾಮಾನ್ಯರು ಉಪಯೋಗಿಸುವ ಎಲ್ಲಾ ವಸ್ತುಗಳಿಗೂ ಜಿಎಸ್ಟಿ ಹೇರಿ ಜನತೆಯನ್ನು  ಸುಲಿಯುತ್ತಿರುವುದು ಖೇದಕರ  ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News