ಉಡುಪಿ ಜಿಲ್ಲೆಗೆ ವಿಮಾನ ನಿಲ್ದಾಣ, ವೈದ್ಯಕೀಯ ಕಾಲೇಜು ಅಗತ್ಯ: ಸಚಿವ ಸುನೀಲ್ ಕುಮಾರ್

Update: 2022-09-25 15:49 GMT

ಬೈಂದೂರು, ಸೆ. 25: ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಂದಾಗಬೇಕು. ಉಡುಪಿ ಜಿಲ್ಲೆಗೊಂದು ವಿಮಾನ ನಿಲ್ದಾಣ, ಸರಕಾರಿ ವೈದ್ಯಕೀಯ ಕಾಲೇಜು, ಕೃಷಿ ಕಾಲೇಜು, ಇಎಸ್‌ಐ ಆಸ್ಪತ್ರೆ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಜನ ಸಂಪರ್ಕದ ಅಭಿವೃದ್ಧಿ ಅಗತ್ಯವಿದೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಬೈಂದೂರು ತಾಲೂಕು ಆಡಳಿತದ ವತಿಯಿಂದ ನಾಗೂರು ಶ್ರೀಗೋಪಾಲಕೃಷ್ಣ ಕಲಾಮಂದಿರದಲ್ಲಿ ರವಿವಾರ ಆಯೋಜಿಸಲಾದ ಉಡುಪಿ ಜಿಲ್ಲೆಯ ರಜತ ಮಹೋತ್ಸವ ಕಾರ್ಯಕ್ರಮವನ್ನು ಅವರು ಮಾತನಾಡುತಿದ್ದರು. ಜಿಲ್ಲೆಯ ಆಧ್ಯಾತ್ಮಿಕ, ಧಾರ್ಮಿಕ ತಳಗಟ್ಟಿನಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಸ ಪೀಳಿಗೆಗೆ ಪರಿಚಯಿಸಿ ರಾಷ್ಟ್ರಮಟ್ಟಕ್ಕೆ ವಿಸ್ತರಿಸಬೇಕು ಎಂದರು.

1997ರಲ್ಲಿ ಘೋಷಣೆಯಾದ ಹೊಸ ಜಿಲ್ಲೆಗಳಲ್ಲಿ ನಡೆದಿರುವ ಅಭಿವೃದ್ದಿಗೆ ಹೋಲಿಸಿದಲ್ಲಿ, ಉಡುಪಿ ಜಿಲ್ಲೆ 20 ವರ್ಷ ಮುಂದಿದ್ದು, ಸ್ಟಾರ್ಟಪ್ ಇಂಡಿಯಾ ಯೋಜನೆಯಡಿ ಹೊಸ ಹೊಸ ಆವಿಷ್ಕಾರ, ಉದ್ಯಮ ಸ್ಥಾಪನೆ ಹೆಚ್ಚಬೇಕು. ಮುಂದಿನ 25ವರ್ಷಗಳ ಅಭಿವೃದ್ಧಿ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಂದ ನೀಲನಕಾಶೆ ತಯಾರಿಸಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ 2,000 ಕೋಟಿ ರೂ. ಅನುದಾನವನ್ನು ಸರಕಾರ ದಿಂದ ತರಲಾಗಿದೆ. ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ, ಉಡುಪಿ ಜಿಲ್ಲೆಗೊಂದು ಸರಕಾರಿ ವೈದ್ಯಕೀಯ ಕಾಲೇಜಿನ ಅಗತ್ಯವಿದೆ. ಕ್ಷೇತ್ರದಲ್ಲಿ ಭಕ್ತರು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಮೂಲಭೂತ ಸೌಲಭ್ಯಗಳ ಮತ್ತಷ್ಟು ಅಭಿವೃದ್ಧಿ ಯಾಗಬೇಕಾಗಿದೆ ಎಂದರು.

ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ನಿರ್ದೇಶಕ ಮಿಥುನ್ ಆರ್. ಹೆಗ್ಡೆ, ಜಿಲ್ಲಾಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರಸನ್ನ ಎಚ್., ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷೆ ಗೀತಾ, ಬೈಂದೂರು ತಹಸೀಲ್ದಾರ್ ಶ್ರೀಕಾಂತ ಎಸ್.ಹೆಗ್ಡೆ, ಬೈಂದೂರು ತಾ.ಪಂ. ಕಾರ್ಯನಿರ್ವಹಣಾಕಾರಿ ಭಾರತಿ ಉಪಸ್ಥಿತರಿದ್ದರು.

ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಸ್ವಾಗತಿಸಿದರು. ವಿಶ್ವನಾಥ ಶೆಟ್ಟಿ ಹಾಗೂ ಸುಧಾಕರ ಪಿ. ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಶೆಟ್ಟಿ ವಂದಿಸಿದರು. ಕುಂದಾಪುರದ ಬಿ.ಬಿ.ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News