ರಾಜಸ್ಥಾನ ಕಾಂಗ್ರೆಸ್ ನಲ್ಲಿ ಮತ್ತೆ ಬಿಕ್ಕಟ್ಟು: ರಾಜೀನಾಮೆ ನೀಡಲಿರುವ 90ಕ್ಕೂ ಹೆಚ್ಚು ಶಾಸಕರು

Update: 2022-09-25 16:39 GMT

ಜೈಪುರ: ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್‌ಗೆ ಸಂಪೂರ್ಣ ಬಿಕ್ಕಟ್ಟಾಗಿ ಪರಿಣಮಿಸಿದೆ. 90 ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಸ್ಪೀಕರ್ ಅವರ ಭೇಟಿಗೆ ತೆರಳಿದ್ದಾರೆಂದು ndtv ವರದಿ ಮಾಡಿದೆ.

ಶಾಸಕರ ಸಾಮೂಹಿಕ ರಾಜೀನಾಮೆಯಿಂದ ರಾಜಸ್ಥಾನ ಕಾಂಗ್ರೆಸ್ ಸರ್ಕಾರ ಪತನಗೊಳ್ಳಬಹುದು ಎಂದು ವರದಿಯಾಗಿದೆ. 92 ಶಾಸಕರ ರಾಜೀನಾಮೆಯಿಂದ ಸದನದ ಬಲವು 108ಕ್ಕೆ ಇಳಿಯಲಿದ್ದು, ಆಗ ಬಹುಮತ ಸಾಬೀತುಪಡಿಸಲು 55 ಸದಸ್ಯರು ಬೇಕಾಗುತ್ತದೆ. ಬಿಜೆಪಿ 70 ಶಾಸಕರನ್ನು ಹೊಂದಿದೆ.

'ಒಬ್ಬ ವ್ಯಕ್ತಿಗೆ ಒಂದು ಹುದ್ದೆ' ಎಂಬ ಕಾಂಗ್ರೆಸ್‌ ನ ನೀತಿ ಅನ್ವಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಗಾದಿ ಅಶೋಕ್‌ ಗೆಹ್ಲೋಟ್‌ ಒಬ್ಬರಲ್ಲೇ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಿಕ್ಕಟ್ಟು ಉಂಟಾಗಿದೆ ಎಂದು ವರದಿಯಾಗಿದೆ.

"ನಾವು ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸುತ್ತೇವೆ" ಎಂದು ಗೆಹ್ಲೋಟ್‌ ಬಣದ ಶಾಸಕರೊಬ್ಬರು ಹೇಳಿದ್ದಾರೆ.

2020 ರಲ್ಲಿ ಸಚಿನ್ ಪೈಲಟ್ ಅವರ ಬಂಡಾಯದ ಸಮಯದಲ್ಲಿ ಸರ್ಕಾರವನ್ನು ಬೆಂಬಲಿಸಿದವರಲ್ಲಿ ಬಹುತೇಕರು ಈಗಲೂ ಮುಖ್ಯಮಂತ್ರಿ ಸ್ಥಾನದಲ್ಲಿ ಗೆಹ್ಲೋಟ್‌ ಇರಬೇಕು ಎಂದು ಬಯಸುತ್ತಿದ್ದಾರೆ. ಶಾಸಕ ಶಾಂತಿ ಧರಿವಾಲ್ ಅವರ ಮನೆಯಲ್ಲಿ ನಡೆದ ಸಭೆಯ ನಂತರ ಅವರು ಈ ಬಗ್ಗೆ ನಿರ್ಣಯವನ್ನು ಅಂಗೀಕರಿಸಿದ್ದಾರೆ.

ಒಬ್ಬರಿಗೆ ಒಂದು ಹುದ್ದೆ ನೀತಿಯನ್ನು ಅನುಸರಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ ನಂತರ ಗೆಹ್ಲೋಟ್ ನಿಷ್ಠಾವಂತರಿಂದ ಒತ್ತಡ ಬಂದಿದೆ. ಅಕ್ಟೋಬರ್ 17 ರಂದು ಚುನಾವಣೆ ನಡೆಯಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಗೆಹ್ಲೋಟ್ ಮುಂಚೂಣಿಯಲ್ಲಿದ್ದಾರೆ. ಒಂದು ವೇಳೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಗೆಹ್ಲೋಟ್‌ ಆಯ್ಕೆಯಾದರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News