ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆ: ಹಿರಿಯ ಹೋರಾಟಗಾರ ಪ್ರಶಾಂತ್ ಭೂಷಣ್

Update: 2022-09-26 02:46 GMT
 ಪ್ರಶಾಂತ್ ಭೂಷಣ್ (Photo- Shekhar Yadav)

ನಾಗ್ಪುರ: ಕಳೆದ ಕೆಲ ವರ್ಷಗಳಿಂದ ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಕಾಡುತ್ತಿದೆ ಎಂದು ಹಿರಿಯ ಹೋರಾಟಗಾರ ಮತ್ತು ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಆಡಳಿತ ಪಕ್ಷದ ದೊಡ್ಡ ಮುಖಂಡರು ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದಾಗ ಭಾರತದ ಚುನಾವಣಾ ಆಯೋಗ ಮೌನ ವಹಿಸುತ್ತದೆ. ಆದರೆ ವಿರೋಧ ಪಕ್ಷಗಳ ಮುಖಂಡರ ಪ್ರಕರಣಗಳಲ್ಲಿ ತ್ವರಿತ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು. ಸರ್ಕಾರದ ಅನುಕೂಲತೆಗೆ ತಕ್ಕಂತೆ ಚುನಾವಣಾ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದೂ ಗಂಭೀರ ಆರೋಪ ಮಾಡಿದರು.

ನ್ಯಾಯಾಂಗದ ಸ್ವಾತಂತ್ರ್ಯ ಕೂಡಾ ಅಪಾಯದಲ್ಲಿದೆ ಎಂದು ಆಪಾದಿಸಿದ ಅವರು, ಸರ್ಕಾರದ ವಿರುದ್ಧ ಮಾತನಾಡುವವರು ದೇಶದ್ರೋಹ ಹಾಗೂ ಇತರ ಗಂಭೀರ ಆರೋಪಗಳನ್ನು ಎದುರಿಸಬೇಕಾಗುತ್ತದೆ ಹಾಗೂ ವರ್ಷಗಳ ಕಾಲ ಅವರಿಗೆ ಜಾಮೀನು ದೊರಕುವುದಿಲ್ಲ ಎಂದು ಅಭಿಪ್ರಾಯಪಟ್ಟರು.

'ದೇಶೋನ್ನತಿ' ಮರಾಠಿ ದೈನಿಕ ಆಯೋಜಿಸಿದ್ದ ಸಮಾರಂಭದಲ್ಲಿ 'ಪ್ರಜಾಪ್ರಭುತ್ವದ ಸವಾಲುಗಳು' ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು.

"ಟಿ.ಎನ್.ಶೇಷನ್ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಬಳಿಕ, ಹಲವು ವರ್ಷಗಳ ಕಾಲ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆದದ್ದನ್ನು ನಾವು ನೋಡುತ್ತೇವೆ. ಆದರೆ ಕಳೆದ ಆರೇಳು ವರ್ಷಗಳಿಂದ ಚುನಾವಣಾ ಆಯೋಗದ ನ್ಯಾಯಪರತೆ ಬಗ್ಗೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಉದ್ಭವಿಸಿದೆ" ಎಂದು ಹೇಳಿದರು.

"ಮೊದಲು ಚುನಾವಣಾ ಆಯೋಗ ಯಾವ ದಿನಾಂಕವನ್ನು ನಿಗದಿಪಡಿಸುತ್ತದೆ ಎಂದು ಸರ್ಕಾರಕ್ಕೆ ಕೂಡಾ ಗೊತ್ತಾಗುತ್ತಿರಲಿಲ್ಲ. ಆದರೆ ಇದೀಗ ಅಧಿಕೃತವಾಗಿ ದಿನಾಂಕ ಘೋಷಣೆಯಾಗುವ ಮುನ್ನ ಆಡಳಿತ ಪಕ್ಷದ ಸದಸ್ಯರು ದಿನಾಂಕ ಹೇಳುತ್ತಾರೆ. ಬಳಿಕ ಅದನ್ನು ಅಧಿಕೃತವಾಗಿ ಆಯೋಗ ಪ್ರಕಟಿಸುತ್ತದೆ" ಎಂದು ವಿಶ್ಲೇಷಿಸಿದರು. ಈ ಬಗ್ಗೆ newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News