ವಿವಿಗಳಲ್ಲಿ ಸರಸ್ವತಿ ವಿಗ್ರಹ ಹೊರತು ಇತರ ವಿಗ್ರಹ ಸ್ಥಾಪಿಸಲು ಅವಕಾಶವಿಲ್ಲ

Update: 2022-09-26 03:30 GMT

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯ ಸೇರಿದಂತೆ ರಾಜ್ಯದ ವಿಶ್ವವಿದ್ಯಾ ನಿಲಯಗಳಲ್ಲಿ ಈ ಹಿಂದೆ ಸ್ಥಾಪಿತಗೊಂಡಿರುವ ವಿಗ್ರಹಗಳನ್ನು ಹೊರತುಪಡಿಸಿ ಇನ್ನು ಮುಂದೆ ಸರಸ್ವತಿ ವಿಗ್ರಹವನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದು ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 21ನೇ ಸಾಮಾನ್ಯ ಸಭೆಯು ಕೈಗೊಂಡಿದ್ದ ನಿರ್ಣಯವು ಇದೀಗ ಮುನ್ನೆಲೆಗೆ ಬಂದಿದೆ.

ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದ ಒಳಗಡೆ ಗಣೇಶ ದೇವಾಲಯ ಸ್ಥಾಪನೆಗೆ ಅವಕಾಶ ನೀಡುವ ಮೂಲಕ ಬಿಜೆಪಿ ಸರಕಾರ ವಿವಿ ಕ್ಯಾಂಪಸ್‌ನ್ನು ಕೇಸರೀಕರಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಆರೋಪಿಸಿರುವುದು ಮತ್ತು ಸಿಂಡಿಕೇಟ್ ಸಭೆ ಕೂಡ ದೇಗುಲ ನಿರ್ಮಾಣಕ್ಕೆ ಅನುಮೋದನೆ ನೀಡಿರುವ  ಬೆನ್ನಲ್ಲೇ  ಸರಸ್ವತಿ ವಿಗ್ರಹ ಹೊರತುಪಡಿಸಿ ಬೇರೆ ಯಾವುದೇ ವಿಗ್ರಹಗಳನ್ನು ವಿವಿಗಳಲ್ಲಿ ಸ್ಥಾಪಿಸಬಾರದು ಎಂದು ಉನ್ನತ ಶಿಕ್ಷಣ ಪರಿಷತ್ ಕೈಗೊಂಡಿದ್ದ ನಿರ್ಣಯವು ಚರ್ಚೆಗೆ ಗ್ರಾಸವಾಗಿದೆ. ಈ ಸಭೆಯ ನಡವಳಿ ಮತ್ತು ಕೈಗೊಂಡಿದ್ದ ನಿರ್ಣಯದ ಪ್ರತಿಯು ‘the-file.in’ಗೆ ಲಭ್ಯವಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿ ವಿಗ್ರಹಗಳನ್ನು ಸ್ಥಾಪಿಸುವ ವಿಚಾರದ ಕುರಿತು ಚರ್ಚೆಯಾಗಿತ್ತು. ಈ ಸಂಬಂಧ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ 21ನೇ ಸಾಮಾನ್ಯ ಸಭೆಯಲ್ಲಿ ಹಲವು ವಿಶ್ರಾಂತ ಕುಲಪತಿಗಳು ಚರ್ಚೆಯಲ್ಲಿ ಪಾಲ್ಗೊಂಡು ಸರಸ್ವತಿ ವಿಗ್ರಹ ಹೊರತುಪಡಿಸಿ ಬೇರಾವುದೇ ವಿಗ್ರಹಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾಪಿಸಬಾರದು ಎಂದು ಸಲಹೆ ನೀಡಿದ್ದರು.

ಸಭೆಯಲ್ಲಿ ಚರ್ಚೆಯಾಗಿದ್ದೇನು?: ಹಿಂದಿನಿಂದಲೂ ಸ್ಥಾಪಿತಗೊಂಡಿರುವ ಹಾಲಿ ವಿಗ್ರಹಗಳನ್ನು ಹೊರತುಪಡಿಸಿ ಇನ್ನು ಮುಂದೆ ವಿಶ್ವವಿದ್ಯಾನಿಲಯಗಳಲ್ಲಿ ಸರಸ್ವತಿ ವಿಗ್ರಹವನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದು ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ್ದ ಹಿಂದಿನ ಸಚಿವರು ವಿಶ್ವವಿದ್ಯಾನಿಲಯಗಳಲ್ಲಿ ಹಿಂದಿನಿಂದಲೂ ಸ್ಥಾಪಿತಗೊಂಡಿರುವ ಹಾಲಿ ವಿಗ್ರಹಗಳನ್ನು ಹೊರತುಪಡಿಸಿ ಇನ್ನು ಮುಂದೆ ಸರಸ್ವತಿ ವಿಗ್ರಹಗಳನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದೆಂದು ಹಾಗೂ ಯಥಾಸ್ಥಿತಿ ಮುಂದುವರಿಸಿಕೊಂಡು ಹೋಗಬೇಕು ಎಂದು ಆದೇಶಿಸಿದ್ದರು.

ವಿಶ್ವವಿದ್ಯಾನಿಲಯಗಳಲ್ಲಿ ಹಿಂದಿನಿಂದಲೂ ಸ್ಥಾಪಿತಗೊಂಡಿರುವ ವಿಗ್ರಹಗಳನ್ನು ಹೊರತು ಪಡಿಸಿ ಇನ್ನು ಮುಂದೆ ಸರಸ್ವತಿ ವಿಗ್ರಹವನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದೆಂದು ತೀರ್ಮಾನಿಸಲಾಗಿತ್ತಲ್ಲದೆ  ಹಾಗೂ ಇನ್ನು ಮುಂದೆ ಕಡ್ಡಾಯವಾಗಿ ಸರಕಾರದ ಅನುಮತಿಯೊಂದಿಗೆ ವಿಗ್ರಹಗಳನ್ನು ಸ್ಥಾಪಿಸಬೇಕು ಎಂದು ನಿರ್ಣಯಿಸಲಾಗಿತ್ತು.

ವಿಶ್ವವಿದ್ಯಾನಿಲಯಗಳಲ್ಲಿ ಯಾವುದೇ ರಾಜಕೀಯ, ಧರ್ಮ ಹಾಗೂ ಶಾಂತಿಗೆ ಧಕ್ಕೆ ತರುವಂತಹ ಇತರ ಘಟನೆಗಳು ನಡೆಯಬಾರದು. ವಿದ್ಯಾರ್ಜನೆ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗ್ಗೆ ಕ್ರಮ ವಹಿಸಬೇಕು. ವಿಶ್ವವಿದ್ಯಾನಿಲಯಗಳ ಖ್ಯಾತಿಗೆ ಧಕ್ಕೆ ಉಂಟಾಗದಂತೆ ಎಲ್ಲರೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ವಿವಿಗಳ ಕುಲಪತಿಗಳಿಗೆ ನಿರ್ದೇಶನ ನೀಡಿದ್ದರು.

ವಿಶ್ರಾಂತ ಕುಲಪತಿ ಪ್ರೊ. ಕೆ. ಸುಧಾರಾವ್ ಅವರು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಜನೆಯೇ ಪ್ರಮುಖ ಧ್ಯೇಯವಾಗಿರುವುದರಿಂದ ಹಿಂದಿನಿಂದಲೂ ಸರಸ್ವತಿ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ. ಆದ್ದರಿಂದ ಸರಸ್ವತಿ ವಿಗ್ರಹವನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಸ್ಥಾಪಿಸಬಾರದು ಎಂದು ಅಭಿಪ್ರಾಯಪಟ್ಟಿದ್ದರು.

ವಿಶ್ರಾಂತ ಕುಲಪತಿ ಪ್ರೊ.ಒ.ಅನಂತರಾಮಯ್ಯ ಅವರು ವಿವಿಗಳಲ್ಲಿ ಯಾವುದೇ ವಿಗ್ರಹ ಸ್ಥಾಪನೆಗೆ ಅವಕಾಶ ನೀಡಬಾರದು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಈ ಹಿಂದೆ ಕುಲಪತಿಗಳಾಗಿದ್ದ ಡಾ.ಡಿ.ಎಂ. ನಂಜುಂಡಪ್ಪ ಅವರು ಸರಸ್ವತಿ ವಿಗ್ರಹವನ್ನು ಸ್ಥಾಪಿಸಿ ಬೆಂಗಳೂರು ವಿವಿಗೆ ಮೆರುಗನ್ನು ತಂದುಕೊಟ್ಟಿದ್ದರು ಎಂದು ವಿವರಿಸಿ ವಿವಿಗಳಲ್ಲಿ ಸರಸ್ವತಿ ವಿಗ್ರಹವನ್ನು ಬಿಟ್ಟು ಬೇರೆ ಯಾವುದೇ ವಿಗ್ರಹಗಳನ್ನು ಅಳವಡಿಸಬಾರದು ಎಂದು ಸಲಹೆ ನೀಡಿದ್ದರು.

ಕೆ.ಆರ್. ವೇಣುಗೋಪಾಲ್ ಅವರು ಕುಲಪತಿಯಾಗಿದ್ದ ಸಂದರ್ಭದಲ್ಲಿ ದೇವಸ್ಥಾನ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆವರಣದಲ್ಲಿ ಈಗಾಗಲೇ ಸಭಾಂಗಣದ ಪಕ್ಕ ಇರುವ ದೇವಸ್ಥಾನವನ್ನು ರಸ್ತೆ ವಿಸ್ತರಣೆ ಯೋಜನೆ ಸಂದರ್ಭದಲ್ಲಿ ಒಡೆದು ಹಾಕಲಾಗುತ್ತದೆ. ಹೀಗಾಗಿ, ದೇವಸ್ಥಾನದ ಮರುನಿರ್ಮಾಣ ಅಥವಾ ಸ್ಥಳಾಂತರಕ್ಕೆ ಹಿಂದಿನ ಕುಲಪತಿ ಅವರು ಒಪ್ಪಿಗೆ ಸೂಚಿಸಿದ್ದರು. ಜತೆಗೆ ಸ್ಥಳವನ್ನು ಸಹ ಅಂತಿಮಗೊಳಿಸಲಾಗಿತ್ತು ಎಂದು ಹಾಲಿ ಕುಲಪತಿ ತಿಳಿಸಿದ್ದರು.

ಈ ಕುರಿತಂತೆ ಪ್ರತಿಕ್ರಿಯಿಸಿದ್ದ ಕುಲಪತಿ ಡಾ.ಜಯಕರ ಶೆಟ್ಟಿ, ದೇವಾಲಯ ನಿರ್ಮಾಣ ನಿರ್ಧಾರವನ್ನು ತಮ್ಮ ಅವಧಿಯಲ್ಲಿ ತೆಗೆದುಕೊಂಡಿಲ್ಲ. ಈ ಹಿಂದೆಯೇ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಇದೀಗ ಕೆಲಸ ಆರಂಭವಾಗಿದೆ. ದೇವಾಲಯ ವಿಚಾರದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವಂತಿಲ್ಲ ಎಂದಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ದೇವಾಲಯ ನಿರ್ಮಾಣ ಕೆಲಸವನ್ನು ನಿಲ್ಲಿಸುವಂತೆ ಶೆಟ್ಟಿ ನಿರ್ದೇಶಿಸಿದ್ದರು. ಆದರೂ ಕಾಮಗಾರಿ ಮುಂದುವರಿದ ಹಿನ್ನೆಲೆಯಲ್ಲಿ ಅವರೇ ಸ್ಥಳಕ್ಕೆ ಧಾವಿಸಿ, ಕೆಲಸವನ್ನು ಸ್ಥಗಿತಗೊಳಿಸಿದ್ದನ್ನು ಸ್ಮರಿಸಬಹುದು.

ಒಂದು ವೇಳೆ ದೇವಾಲಯ ನಿರ್ಮಾಣ ಕೆಲಸವನ್ನು ಮುಂದುವರಿಸಿದರೆ ಅವರ ವಿರುದ್ಧ ಪೊಲೀಸ್ ದೂರು ಸಲ್ಲಿಸಲಾಗುವುದು ಎಂದು ನೈಜ ಹೋರಾಟಗಾರರ ವೇದಿಕೆ, ಸ್ನಾತಕೋತ್ತರ ಮತ್ತು ಸಂಶೋಧಕ ವಿದ್ಯಾರ್ಥಿಗಳ ಒಕ್ಕೂಟ ಎಚ್ಚರಿಕೆ ನೀಡಿತ್ತು.

ಆಡಳಿತಾರೂಢ ಬಿಜೆಪಿ ಸರಕಾರದಿಂದ ವಿವಿ ಕ್ಯಾಂಪಸ್ ಒಳಗಡೆ ಕೇಸರೀಕರಣದ ಹುನ್ನಾರ ನಡೆದಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು. ಯುಜಿಸಿ ಮಾರ್ಗಸೂಚಿ ಮತ್ತು ಕಾನೂನಿನಲ್ಲಿ ದೇವಾಲಯ, ಚರ್ಚ್, ಮಸೀದಿಗಳಂತಹ ಧಾರ್ಮಿಕ ಸ್ಥಳಗಳ ನಿರ್ಮಾಣಕ್ಕೆ ಅವಕಾಶ ನೀಡಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದನ್ನು ಸ್ಮರಿಸಬಹುದು.

ಕ್ಯಾಂಪಸ್‌ನಲ್ಲಿ ಎಷ್ಟೇ ಖರ್ಚಾದರೂ ದೇವಾಲಯ ನಿರ್ಮಿಸಲಾಗುವುದು ಆದರೆ, ಪ್ರತಿಭಟನೆಗಳು ವಿರೋಧ ಪಕ್ಷಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳ ಪಿತೂರಿಯ ಭಾಗವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಆದರೆ, ಕ್ಯಾಂಪಸ್ ನಲ್ಲಿ ದೇವಾಲಯ ನಿರ್ಮಿಸಲು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಬಹಿರಂಗವಾಗಿ ಸವಾಲು ಹಾಕಿದ್ದರು.

Writer - ಜಿ.ಮಹಾಂತೇಶ್

contributor

Editor - ಜಿ.ಮಹಾಂತೇಶ್

contributor

Similar News