ಅ.10ರಿಂದ ಯಕ್ಷಗಾನ, ಭರತನಾಟ್ಯ, ರಂಗಭೂಮಿ ತರಬೇತಿ

Update: 2022-09-26 16:18 GMT
ಯಕ್ಷಗಾನ

ಉಡುಪಿ, ಸೆ.26: ಭಾರತೀಯ ಕಲೆ, ಸಂಸ್ಕೃತಿಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವುದಕ್ಕೆ ಮಣಿಪಾಲದ ತಪೋವನ ಪರಂಪರಾ ವೇದಿಕೆ ಕಲ್ಪಿಸುತ್ತಿದ್ದು, ಅ.10ರಿಂದ ಕ್ರೈಸ್ಟ್ ಸ್ಕೂಲ್ ಮುಂಭಾಗದ ಪ್ರಗತಿ ಪ್ರೈಡ್ ಕಟ್ಟಡದ ತಪೋವನ ಪರಂಪರಾ ಕಲಾವೇದಿಕೆಯಲ್ಲಿ ಸಂಗೀತ, ರಂಗಭೂಮಿ ಸಹಿತ ವಿವಿಧ ಕಲೆಗಳ ಬಗ್ಗೆ ತರಗತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಪೋವನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಸತ್ಯಜಿತ್ ಕಡಕೊಳ್ ತಿಳಿಸಿದ್ದಾರೆ.

ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಪೋವನದ ಪರಂಪರಾ ಲಲಿತ ಕಲೆಗಳ ವಿಭಾಗದಲ್ಲಿ ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಮತ್ತು ರಂಗಭೂಮಿಯಂತಹ ನಾನಾ ಕಲಾ ಪ್ರಕಾರಗಳನ್ನು ಕಲಿಯಲು ಅವಕಾಶ ಕಲ್ಪಿಸಿದ್ದೇವೆ. ಮುಂದಿನ ಹಂತದಲ್ಲಿ ಕಥಕ್ ಸಹಿತ ನಶಿಸಿ ಹೋಗುವ ಕಲಾ ಪ್ರಕಾರಗಳನ್ನು ಪರಿಚಯಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ ಎಂದರು.

ಅ.10ರಿಂದ (ಸಂಜೆ 5.30 ರಿಂದ 6.30ರ ವರೆಗೆ) ತರಬೇತಿ ಆರಂಭಿಸಲಾಗುವುದು. ಸೋಮವಾರ ಆಲ್ ಇಂಡಿಯಾ ರೇಡಿಯೋ ಬಿ ಹೈ ಗ್ರೇಡ್ ಕಲಾವಿದೆ ಚಿನ್ಮಯಿ ದೀಕ್ಷಿತ್ ಅವರಿಂದ ಕರ್ನಾಟಕ ಸಂಗೀತ, ಮಂಗಳವಾರ ಪ್ರಸಿದ್ಧ ಕಲಾವಿದೆ ವಿ.ಧನ್ಯಶ್ರೀ ಪ್ರಭು ಅವರಿಂದ ಭರತನಾಟ್ಯ, ಗುರುವಾರ ಹಾಗೂ ಶುಕ್ರವಾರ ರಂಗಭೂಮಿ ಕಲಾವಿದೆ ರೇವತಿ ನಾಡಗೀರ ಅವರಿಂದ ರಂಗಭೂಮಿ (3 ತಿಂಗಳು) ಹಾಗೂ ಭಾನುವಾರ ಖ್ಯಾತ ಕಲಾವಿದ ಸುಜೇಂದ್ರ ಹಂದೆ ಅವರಿಂದ ಯಕ್ಷಗಾನ ತರಬೇತಿ ಹಾಗೂ ವೇದವ್ಯಾಸ ಸಂಶೋಧನಾ ಕೇಂದ್ರದ ಸಂಚಾಲಕ ಡಾ. ಆನಂದ ತೀರ್ಥರಿಂದ ಭಗವದ್ಗೀತೆಯ ಹದಿನೆಂಟು ಅಧ್ಯಾಯದ ಭೋದನೆ (6 ತಿಂಗಳು ಕೋರ್ಸ್) ಮಾಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪರಂಪರಾ ವಿಭಾಗ ಸಂಚಾಲಕಿ ಮೈತ್ರಿ ಉಪಾಧ್ಯಾಯ, ರಂಗಭೂಮಿ ಕಲಾವಿದೆ ರೇವತಿ ನಾಡಗೀರ, ತಪೋವನ ನಿರ್ದೇಶಕಿ ಉಡುಪಿ ವೆಂಕಟೇಶ್ ಶೇಟ್, ಜಯಂತಿಲಾಲ್ ಪಟೇಲ್, ರತಿಲಾಲಾ ಪಟೇಲ್, ಚಿನ್ಮಯಿ ದೀಕ್ಷಿತ್, ಧನ್ಯಶ್ರೀ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News