ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದ ಅಶೋಕ್ ಗೆಹ್ಲೋಟ್‌:‌ ವರದಿ

Update: 2022-09-26 16:36 GMT
ಅಶೋಕ್ ಗೆಹ್ಲೋಟ್‌

ಜೈಪುರ: ರಾಜಸ್ಥಾನ ಕಾಂಗ್ರೆಸಿನಲ್ಲಿ(Congress) ಉಂಟಾದ ತೀವ್ರ ರಾಜಕೀಯ ಬಿಕ್ಕಟ್ಟು ಮತ್ತು ಆಂತರಿಕ ಕಲಹದ ನಡುವೆ, ಪಕ್ಷದ ಅಧ್ಯಕ್ಷೀಯ ಚುನಾವಣೆಯ ರೇಸ್‌ನಿಂದ ಅಶೋಕ್ ಗೆಹ್ಲೋಟ್(Ashok Gehlot) ಹೊರಗುಳಿದಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಪ್ರಸ್ತುತ ಕಾಂಗ್ರೆಸ್‌ನ ಉನ್ನತ ನಾಯಕತ್ವಕ್ಕಾಗಿ ಪಕ್ಷದ ಹಿರಿಯ ನಾಯಕರಾದ ಕೆಸಿ ವೇಣುಗೋಪಾಲ್, ದಿಗ್ವಿಜಯ ಸಿಂಗ್ ಮತ್ತು ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿದ್ದಾರೆ ಎಂದು ವರದಿಯಾಗಿದೆ.

"ಅವರು (ಅಶೋಕ್ ಗೆಹ್ಲೋಟ್) ಕಾಂಗ್ರೆಸ್ ಅಧ್ಯಕ್ಷೀಯ ರೇಸ್‌ನಿಂದ ಹೊರಗುಳಿದಿದ್ದಾರೆ. ಸೆಪ್ಟೆಂಬರ್ 30 ರ ಮೊದಲು ಇತರ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಮುಕುಲ್ ವಾಸ್ನಿಕ್, ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ ಸಿಂಗ್, ಕೆಸಿ ವೇಣುಗೋಪಾಲ್ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿದ್ದಾರೆ" ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

"ಗೆಹ್ಲೋಟ್ ನಡೆದುಕೊಂಡ ರೀತಿ ಪಕ್ಷದ ನಾಯಕತ್ವದ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ನಾಯಕತ್ವವು ಅವರ ಬಗ್ಗೆ ತುಂಬಾ ಅಸಮಾಧಾನ ಹೊಂದಿದೆ" ಎಂದು ಸಿಡಬ್ಲ್ಯೂಸಿ ಸದಸ್ಯರಾಗಿರುವ ಮತ್ತೊಬ್ಬ ನಾಯಕ ಹೇಳಿದ್ದಾರೆ.

ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಬಣಗಳ ನಡುವಿನ ಜಗಳಕ್ಕೆ ಮಧ್ಯಸ್ಥಿಕೆ ವಹಿಸಲು ಕಾಂಗ್ರೆಸ್ ಹೈಕಮಾಂಡ್ ಕಮಲ್ ನಾಥ್ ಅವರನ್ನು ನೇಮಿಸಿದೆ ಎಂದು ಮೂಲಗಳು ತಿಳಿಸಿವೆ. ಅಶೋಕ್ ಗೆಹ್ಲೋಟ್ ತಮ್ಮೊಂದಿಗೆ ಮಾತನಾಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಕಮಲ್ ನಾಥ್ ಸೋಮವಾರ ಹೇಳಿದ್ದಾರೆ.

'ಒಬ್ಬ ವ್ಯಕ್ತಿಗೆ ಒಂದು ಹುದ್ದೆʼ ಎಂಬ ಕಾಂಗ್ರೆಸ್‌ ನ ನೀತಿ ಅನ್ವಯ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಗಾದಿ ಅಶೋಕ್‌ ಗೆಹ್ಲೋಟ್‌ ಒಬ್ಬರಲ್ಲೇ ಉಳಿಯುವುದಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನ ಸಿಕ್ಕರೆ ಮುಖ್ಯಮಂತ್ರಿ ಪಟ್ಟವನ್ನು ಬಿಟ್ಟು ಕೊಡಲೇ ಬೇಕೆಂದು ಕಾಂಗ್ರೆಸ್‌ ಹೈಕಮಾಂಡ್‌ ಒತ್ತಾಯ ಪಡಿಸಿದ್ದರಿಂದ ಬಿಕ್ಕಟ್ಟು ಉಂಟಾಗಿತ್ತು. ಗೆಹ್ಲೋಟ್‌ ರನ್ನು ಬೆಂಬಲಿಸಿ ಅವರ 90ಕ್ಕೂ ಅಧಿಕ ಶಾಸಕರು ರಾಜಿನಾಮೆ ನೀಡುವ ಬೆದರಿಕೆಯನ್ನು ಪಕ್ಷಕ್ಕೆ ಒಡ್ಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News