ಉತ್ತರ ಪ್ರದೇಶ: ದಲಿತ ವಿದ್ಯಾರ್ಥಿಯ ಥಳಿಸಿ ಹತ್ಯೆಗೈದ ಅಧ್ಯಾಪಕ

Update: 2022-09-26 17:28 GMT

ಹೊಸದಿಲ್ಲಿ, ಸೆ. 26: ಪ್ರಬಲ ಜಾತಿಯ ಶಿಕ್ಷಕರೊಬ್ಬರು 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಥಳಿಸಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಔರೆಯ್ಯಾ ಜಿಲ್ಲೆಯ ಆದರ್ಶ್ ಇಂಟರ್‌ಕಾಲೇಜಿನಲ್ಲಿ ನಡೆದಿದೆ ಎಂದು indiatoday ವರದಿ ಮಾಡಿದೆ.

ದಲಿತ ವಿದ್ಯಾರ್ಥಿ ನಿಖಿಲ್ ದೊಹ್ರೆ ಪರೀಕ್ಷೆಯಲ್ಲಿ ಸಣ್ಣ ತಪ್ಪು ಮಾಡಿದ್ದ. ಈ ಹಿನ್ನೆಲೆಯಲ್ಲಿ ಸಮಾಜ ವಿಜ್ಞಾನ ಅಧ್ಯಾಪಕ ಅಶ್ವಿನಿ ಸಿಂಗ್ ಆತನಿಗೆ ಥಳಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡಿದ್ದ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಿನ ಕಳೆದಂತೆ ಆತನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಅನಂತರ ಆತ ಸಾವನ್ನಪ್ಪಿದ ಎಂದು ವರದಿ ಹೇಳಿದೆ.

ಟ್ವಿಟರ್‌ನ ‘ದಲಿತ್ ವಾಯ್ಸ್’ ಎಂಬ ಅಧಿಕೃತ ಪೇಜ್ ಈ ಘಟನೆಯನ್ನು ಶೇರ್ ಮಾಡಿಕೊಂಡಿದೆ. ‘‘ಉತ್ತರಪ್ರದೇಶದ ಔರೈಯಾದಲ್ಲಿ ಸಂಭವಿಸಿದ ಇದು ತೀವ್ರ ನೋವಿನ ಸಂಗತಿ. ಆದರ್ಶ್ ಇಂಟರ್ ಕಾಲೇಜಿನ 10ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಪ್ರಬಲ ಜಾತಿಯ ಅಧ್ಯಾಪಕ ಅಶ್ವಿನಿ ಸಿಂಗ್ ಥಳಿಸಿ ಹತ್ಯೆಗೈದಿದ್ದಾರೆ. ಅಚ್ಚಾಲ್ಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅದು ಟ್ವೀಟ್ ಮಾಡಿದೆ.

ವಿದ್ಯಾರ್ಥಿಯ ಸಾವಿನ ಕಾರಣವನ್ನು ತನಿಖೆ ಮಾಡಲು ವೀಡಿಯೊ ದೃಶ್ಯಾವಳಿ ಹಾಗೂ ಮಾಹಿತಿಯ ಕುರಿತು ಪೊಲೀಸರ ತಂಡ ಎತವಾಹ್ ಜಿಲ್ಲಾಧಿಕಾರಿ ಕಚೇರಿಯೊಂದಿಗೆ ಮಾತುಕತೆ ನಡೆಸಿದೆ ಎಂದು ಔರೈಯಾದ ಪೊಲೀಸ್ ಅಧೀಕ್ಷಕ ಚಾರು ನಿಗಮ್ ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಆರೋಪಿಯನ್ನು ಬಂಧಿಸಲು ವಿಶೇಷ ತನಿಖಾ ತಂಡ ರೂಪಿಸಲಾಗಿದೆ. ಶೀಘ್ರ ನ್ಯಾಯ ನೀಡಲಾಗುವುದು ಎಂದು ನಿಗಮ್ ಅವರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News