ಪಿಎಫ್‌ಐ ಸದಸ್ಯರ ವಿರುದ್ಧದ ದೇಶದ್ರೋಹ ಆರೋಪದ ಪ್ರಕರಣ ರದ್ದುಗೊಳಿಸಿದ ಪುಣೆ ಪೊಲೀಸರು

Update: 2022-09-26 17:42 GMT

ಮುಂಬೈ, ಸೆ. 26: ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಆರೋಪದಲ್ಲಿ ಪಿಎಫ್‌ಐ ಸದಸ್ಯರ ವಿರುದ್ಧ ದಾಖಲಿಸಲಾದ ದೇಶ ದ್ರೋಹದ ಪ್ರಕರಣವನ್ನು ಪುಣೆ ಪೊಲೀಸರು ಕೈ ಬಿಟ್ಟಿದ್ದಾರೆ.

ಭಯೋತ್ಪಾದನೆ ಚಟುವಟಿಕೆಗಳಿಗೆ ಬೆಂಬಲ ನೀಡಿದ ಆರೋಪದಲ್ಲಿ ಎನ್‌ಐಎ ತನ್ನ ಸದಸ್ಯರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಪಿಎಫ್‌ಐ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಅವರು ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

ಇಂತಹ ಘೋಷಣೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರವಿವಾರ ಹೇಳಿದ್ದರು. ಅಲ್ಲದೆ, ದೇಶದ್ರೋಹದ ಪ್ರಕರಣ ದಾಖಲಿಸುವ ಮೂಲಕ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು. ಅನಂತರ ಪುಣೆ ಪೊಲೀಸ್ ಆಯುಕ್ತ ಅಮಿತಾಬ್ ಗುಪ್ತಾ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ, 153ಎ, 153ಬಿ, 120ಬಿ ಹಾಗೂ 109ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು.

ಪರಿಶೀಲನೆ ನಡೆಸುವ ವರೆಗೆ ಈ ಕಾನೂನಿನ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸದಂತೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶಿಸಿ ಸುಪ್ರೀಂ ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ಪಿಎಫ್‌ಐ ವಿರುದ್ಧ ದಾಖಲಿಸಿದ  ದೇಶದ್ರೋಹದ ಪ್ರಕರಣವನ್ನು ರದ್ದುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News