2024ರ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ನಡ್ಡಾ ಅಧಿಕಾರಾವಧಿ ವಿಸ್ತರಣೆ ಸಾಧ್ಯತೆ

Update: 2022-09-26 18:11 GMT

ಹೊಸದಿಲ್ಲಿ,ಸೆ.26: ಮುಂದಿನ ಸಾರ್ವತ್ರಿಕ ಚುನಾವಣೆಗಳಿಗೆ ಎರಡು ವರ್ಷಗಳೂ ಉಳಿದಿಲ್ಲ ಮತ್ತು ಅದಕ್ಕೂ ಮುನ್ನ ಹಲವು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಅಧಿಕಾರಾವಧಿ ವಿಸ್ತರಣೆಗೊಳ್ಳುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ನಡ್ಡಾ 2020ರಲ್ಲಿ ಅಮಿತ್ ಶಾ ಅವರಿಂದ ಪಕ್ಷದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು.

2024 ಎಪ್ರಿಲ್-ಮೇನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಪೂರ್ಣಗೊಳ್ಳುವವರೆಗೂ ನಡ್ಡಾ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ. ನಿಗದಿಯಂತೆ ನಡ್ಡಾ ಅವರ ಅಧಿಕಾರಾವಧಿ 2023,ಜ.20ಕ್ಕೆ ಅಂತ್ಯಗೊಳ್ಳಲಿತ್ತು.

ಬಿಜೆಪಿ ನಾಯಕರ ಪ್ರಕಾರ ನಡ್ಡಾ ಪ್ರಧಾನಿ ನರೇಂದ್ರ ಮೋದಿಯವರ ವಿಶ್ವಾಸಪಾತ್ರರಾಗಿದ್ದಾರೆ ಮತ್ತು ಅವರ ಉತ್ತಮ ಸಾಧನೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅಲ್ಲದೆ ಜಾತಿ ಸಮೀಕರಣವೂ ನಡ್ಡಾ ಪರವಾಗಿದೆ.

ಜುಲೈ 2019ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ನಡ್ಡಾ,2020 ಜ.20ರಂದು ಸರ್ವಾನುಮತದಿಂದ ಪೂರ್ಣಕಾಲಿಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಬಿಜೆಪಿಯ ಸಂವಿಧಾನದಂತೆ ಪಕ್ಷದ ಅಧ್ಯಕ್ಷರು ತಲಾ ಮೂರು ವರ್ಷಗಳ ಎರಡು ಸತತ ಅವಧಿಗೆ ಅಧಿಕಾರದಲ್ಲಿರಬಹುದು. ಅಲ್ಲದೆ ಕನಿಷ್ಠ ಶೇ.50ರಷ್ಟು ರಾಜ್ಯ ಘಟಕಗಳಲ್ಲಿ ಸಂಘಟನಾತ್ಮಕ ಚುನಾವಣೆಗಳು ನಡೆದ ಬಳಿಕ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸುವ ನಿಬಂಧನೆಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News