ದಲಿತ ವೈದ್ಯನಿಂದ ಮರಣೋತ್ತರ ಪರೀಕ್ಷೆ: ಅಂತ್ಯಕ್ರಿಯೆ ಬಹಿಷ್ಕರಿಸಿದ ಗ್ರಾಮಸ್ಥರು !

Update: 2022-09-26 18:12 GMT

ಭುವನೇಶ್ವರ, ಸೆ. 26: ದಲಿತ ವೈದ್ಯ ಮರಣೋತ್ತರ ಪರೀಕ್ಷೆ ನಡೆಸಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವರ ಮೃತದೇಹದ ಅಂತ್ಯಕ್ರಿಯೆಯನ್ನು ಕುಟುಂಬಿಕರು ಹಾಗೂ ಗ್ರಾಮಸ್ಥರು ಬಹಿಷ್ಕರಿಸಿದ ಆಘಾತಕಾರಿ ಘಟನೆ ಒಡಿಶಾದ ಬರಗಡ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ದಿನಗೂಲಿ ನೌಕರ ಮಚುನು ಸಂಧಾ ಅವರು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದರು. ಅನಂತರ ದಲಿತ ವೈದ್ಯರೊಬ್ಬರು ಮರಣೋತ್ತರ ಪರೀಕ್ಷೆ ನಡೆಸಿದ್ದರು. ಮೃತದೇಹವನ್ನು ಶುಕ್ರವಾರ ಆ್ಯಂಬುಲೆನ್ಸ್‌ನಲ್ಲಿ ಊರಿಗೆ ತರಲಾಗಿತ್ತು.

ಮಚುನುವಿನ ಮೃತದೇಹವನ್ನು ದಲಿತ ವೈದ್ಯ ಮರಣೋತ್ತರ ಪರೀಕ್ಷೆ ನಡೆಸಿದ್ದಾನೆ ಎಂದು ಗ್ರಾಮದ ಜನರಿಗೆ ಹಾಗೂ ಸಂಬಂಧಿಕರಿಗೆ ತಿಳಿಯಿತು. ಆದುದರಿಂದ ಅವರು ಅಂತ್ಯಕ್ರಿಯೆ ಬಹಿಷ್ಕರಿಸಿದ್ದಾರೆ. ಪರಿಣಾಮ ಮಚುನುವಿನ ಮೃತದೇಹ  ಮನೆಯ ಒಳಗೇ ಬಾಕಿ ಆಗಿತ್ತು. ಅವರ ಗರ್ಭಿಣಿ ಪತ್ನಿ, 3 ವರ್ಷದ ಪುತ್ರಿ ಹಾಗೂ ಅವರ ತಾಯಿಗೆ ದಿಕ್ಕೇ ತೋಚದಂತಾಗಿತ್ತು ಎಂದು ವರದಿಯಾಗಿದೆ.

ಈ ಮಾಹಿತಿ ತಿಳಿದ ಬಳಿಕ ಗ್ರಾಮ ಪಂಚಾಯತ್ ಸರಪಂಚನ ಪತಿ ಸುನೀಲ್ ಬೆಹೆರಾ ಅವರು ಮೃತದೇಹನ್ನು ಬೈಕ್‌ನಲ್ಲಿ ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದ್ದಾರೆ.

‘‘ಆತ ಹಲವು ತಿಂಗಳಿಂದ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕಕ್ಕೆ ಕೊಂಡೊಯ್ಯುವ ಸಂದರ್ಭ ಅವರು ಮೃತಪಟ್ಟಿದ್ದರು. ನಾವು 8 ಸಾವಿರ ರೂಪಾಯಿ ಸಂಗ್ರಹಿಸಿ ಆ್ಯಂಬುಲೆನ್ಸ್‌ಗೆ ಪಾವತಿಸಿದೆವು’’ ಎಂದು ಅವರು ತಿಳಿಸಿದ್ದಾರೆ.

ಅಂತ್ಯಕ್ರಿಯೆ ಬಹಿಷ್ಕರಿಸಿದ ಬಗೆಗಿನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸುನೀಲ್ ನುಣುಚಿಕೊಂಡಿದ್ದಾರೆ. ಗ್ರಾಮದ ನಿವಾಸಿಗಳು ತಮ್ಮದೇ ನಿಯಮ ರೂಪಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ಮೃತದೇಹಗಳ ಅಂತ್ಯ ಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವುದಿಲ್ಲ ಎಂಬವುದು ಆ ನಿಯಮ. ಮಚುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿರುವುದರಿಂದ ಅವರು ಅಸಮಾಧಾನಗೊಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಅವರ ಕುಟುಂಬದಲ್ಲಿ ಪುರುಷ ಸದಸ್ಯನಿಲ್ಲ. ಆದುದರಿಂದ ನಾನು ಬೈಕ್‌ನಲ್ಲಿ ಮೃತದೇಹವನ್ನು ಕೊಂಡೊಯ್ದು ಅಂತ್ಯಕ್ರಿಯೆ ನಡೆಸಿದೆ ಎಂದು ಸುನೀಲ್ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News