ಯಾರು ಅನ್ಯರು?

Update: 2022-09-27 05:15 GMT

ಜೀವ ಉಳಿಸುವ ರಕ್ತದಾನ ಅಥವಾ ರಕ್ತ ವರ್ಗಾವಣೆಯ ಕ್ರಿಯೆ ಮತ್ತು ಪ್ರಕ್ರಿಯೆಯಲ್ಲಿ ಮನುಷ್ಯತ್ವದ ಮತ್ತು ಮನುಕುಲದ ಸಂಪೂರ್ಣ ವಿಕಸಿತ ಅಡಿಪಾಯವೇ ಅಡಗಿದೆ. ರಕ್ತವೇ ಹೇಳುತ್ತದೆ ಅದರ ಬಣ್ಣವೇ ಸೂಚಿಸುತ್ತದೆ ನಾವೆಲ್ಲರೂ ಒಂದೇ ಎಂದು. ಯಾರದ್ದೋ ದೇಹದಲ್ಲಿ ಜೀವಂತಿಕೆಯನ್ನು ಪಡೆದ ರಕ್ತಕಣಗಳು ಇನ್ಯಾರದ್ದೋ ದೇಹ ಹೊಕ್ಕು ಅಲ್ಲಿನ ಜೀವಕಣಗಳಾಗಿ ಕೆಲಸಮಾಡುವಾಗ ನಾವೆಲ್ಲರೂ ಜೀವ ವ್ಯವಸ್ಥೆಯ ಬಂಧುಗಳು ಎನ್ನುವುದನ್ನು ಪ್ರಮಾಣೀಕರಿಸುತ್ತದೆ. ನಾವಿಲ್ಲಿ ಭಾರತದ ವಿಚಾರಕ್ಕೆ ಬಂದಾಗ ಆರ್ಯರು, ದ್ರಾವಿಡರು ಎಂದು ಇಬ್ಭಾಗವನ್ನು ಸೃಷ್ಟಿಸಿಕೊಂಡಿದ್ದೇವೆ. ಹೌದು ಇತಿಹಾಸ ನಮ್ಮ ಮೂಲ ಇದನ್ನು ಅಲ್ಲೆಗಳೆಯದಿರೋಣ ಆದರೆ ಆರ್ಯರು ದ್ರಾವಿಡರು ಈಗ ಒಟ್ಟಿಗೇ ಇರುವುದು ಭಾರತೀಯರೆನ್ನುವ ಒಕ್ಕೊರಲಿನಲ್ಲಿ ಬೆರೆತಿರುವುದು ಮೂಲದಷ್ಟೇ ಸತ್ಯ. ಆಚಾರಗಳಲ್ಲಿ, ಭಾವನೆಗಳಲ್ಲಿ, ಸಂಬಂಧಗಳಲ್ಲಿ ಹಲವು ಅಂತರದ ಗೋಡೆಯನ್ನು ನಿರ್ಮಿಸಿಕೊಂಡು ಬದುಕುತ್ತಿದ್ದೇವೆ ಎನ್ನುವುದೇ ದುಸ್ತರ ಸಂಗತಿ ಮತ್ತು ಐಕ್ಯತೆಯ ಬಿರುಕು ಎನ್ನಬಹುದು. ಆದರೆ ಈ ರಕ್ತ ಎನ್ನುವುದು ಆರ್ಯರನ್ನು ದ್ರಾವಿಡರನ್ನು ಒಂದೇ ಎಂದು ಸಾರುತ್ತಿದೆ. ಹಾಗೂ ಈ ರಕ್ತವರ್ಗಾವಣೆಯ ಮೂಲಕ ಆರ್ಯರ ಜೀವ ವ್ಯವಸ್ಥೆಯನ್ನು ದ್ರಾವಿಡರ ರಕ್ತವು ಉಳಿಸಿದೆ, ಆರ್ಯರ ಜೀವಕೋಶದ ಕಣಕಣದಲ್ಲೂ ಬೆರೆತಿದೆ. ದ್ರಾವಿಡರ ಜೀವ ವ್ಯವಸ್ಥೆಯನ್ನು ಆರ್ಯರ ರಕ್ತವು ಉಳಿಸಿದೆ ಹಾಗೂ ದ್ರಾವಿಡರ ಜೀವಕೋಶದ ಕಣಕಣದಲ್ಲೂ ಬೆರೆತಿದೆ. ಈ ಮೂಲಕ ಆರ್ಯರು ದ್ರಾವಿಡರು ರಕ್ತಸಂಬಂಧಿಗಳಾಗಿದ್ದಾರೆ. ಈ ರಕ್ತವನ್ನು ವಿಜ್ಞಾನದ ಪ್ರಕಾರವೇ ನೋಡುವುದಾದರೆ ಮಾನವನ ಹಲವಾರು ವಿಕಸಿತ ಅಂಶಗಳನ್ನು ಮತ್ತು ಆನುವಂಶಿಕ ಗುಣಗಳನ್ನು ಪಡೆದಿರುತ್ತದೆ. ಒಂದು ಜೀವ ವ್ಯವಸ್ಥೆಯ ಬಹುಪಾಲು ಅಂಶಗಳು ಇನ್ನೊಂದು ಜೀವ ವ್ಯವಸ್ಥೆಯೊಡನೆ ರಕ್ತದ ವರ್ಗಾವಣೆ ಏರ್ಪಟ್ಟಾಗ ಸೇರುತ್ತದೆ. ಈ ಒಂದು ಕಾರಣದಲ್ಲಿ ಆರ್ಯರು ಅಥವಾ ದ್ರಾವಿಡರು ಅನಾರೋಗ್ಯಕ್ಕೆ ತುತ್ತಾದಾಗ ಎಷ್ಟೋ ಬಾರಿ ಎರಡೂ ಜನಾಂಗಗಳ ಆನುವಂಶಿಕ ವಿಕಸಿತ ಅಂಶಗಳ ಕೊಡುಕೊಳ್ಳುವಿಕೆ ಸಾಕಷ್ಟು ಜರುಗಿದೆ. ಇಂತಹ ಸಂದರ್ಭಗಳಲ್ಲಿ ಆರ್ಯ-ದ್ರಾವಿಡರ ದೈಹಿಕಶಕ್ತಿ, ಪ್ರಾಣಶಕ್ತಿ ಮತ್ತು ಇನ್ನಿತರ ಅಂಶಗಳು ಪರಸ್ಪರರಲ್ಲಿ ಅರಿವಿಗೆ ಬಾರದಂತೆಯೇ ಬೆರೆತು ಹೋಗಿದೆ.

ಈ ರಕ್ತದಾನದ ಪ್ರಕ್ರಿಯೆಯ ಆಧಾರದ ಮೇಲೆ ನಾವೆಲ್ಲರೂ ಪ್ರಸಕ್ತದ ದಿನನಿತ್ಯದ ಸಂಸ್ಕೃತಿಯನ್ನು ಗಮನಿಸಿದರೆ ಧಾರ್ಮಿಕ, ಸಾಮಾಜಿಕ, ಕೌಟುಂಬಿಕ ನಡಾವಳಿಗಳಲ್ಲಿ ಮತ್ತಷ್ಟು ವಿಚಾರಗಳಲ್ಲಿ ಆರ್ಯರು-ದ್ರಾವಿಡರು ಒಂದಾಗಿದ್ದೇವೆ ಎನ್ನುವುದನ್ನು ಪತ್ತೆಹಚ್ಚಿಕೊಳ್ಳಬಹುದು. ಮಾನವನ ವಿಕಸಿತಗಳಲ್ಲಿ ಈ ಬಗೆಯ ಬೆರೆಯುವಿಕೆಯ ಕ್ರಿಯೆಯೂ ಪ್ರಮುಖವಾದದ್ದು. ಮಾನವರಾದ ನಾವು ಆಳವಾಗಿ ಭಿನ್ನತೆಗಳನ್ನು ಅಥವಾ ಭೇದಗಳನ್ನು ವರ್ಗ, ಜಾತಿ, ಲಿಂಗ, ಜನಾಂಗ, ಪ್ರಾದೇಶಿಕ ಈ ವಿಚಾರಗಳಲ್ಲಿ ನೆಲೆವೂರಿಸಿಕೊಂಡರೂ ಪ್ರಕೃತಿಯ ಮುಂದೆ ವಿಫಲರು. ಪ್ರಕೃತಿ ನೀಡುವ ಶಕ್ತಿಗಳಿಂದಾಗಿ ಮಾನವ ತೋರುವ ಜಾಣ್ಮೆಯಲ್ಲಿಯೇ, ಆವಿಷ್ಕಾರಗಳಲ್ಲಿಯೇ ಪ್ರಕೃತಿಯ ನಿಜ ಧರ್ಮ ಪುನರ್ ಸಂಘಟಿತವಾಗುತ್ತಿರುತ್ತದೆ. ಶ್ರೇಷ್ಠ-ಕನಿಷ್ಠವನ್ನು ಎಲ್ಲದರಲ್ಲೂ ಕಂಡುಕೊಂಡು ಆಚರಣೆಗೆ ಮುಂದಾಗುವ ನಾವು ಪ್ರಕೃತಿ ತೋರುವ ಮಾರ್ಗದಲ್ಲಿ ಒಂದೇ ಎಳೆಗೆ ಸಿಲುಕುತ್ತೇವೆ ಮತ್ತು ಸಮಾನತೆಯ ಅಂಶಕ್ಕೆ ಒಳಪಡುತ್ತೇವೆ. ಇದು ಕಾಲಾನಂತರ ಸುದೀರ್ಘವಾಗಿ ನಡೆಯುವ ಪ್ರಕೃತಿಯ ನಿಯಮ. ಇದನ್ನು ಮಾನವರು ಬದಲಿಸಲು ಸಾಧ್ಯವಿಲ್ಲ. ಮಾನವರು ಮನುಷ್ಯರಾಗಿ ಪ್ರಕೃತಿ ಹೇಳಿದಂತೆ ಬದುಕಬೇಕಾಗಿರುವುದೇ ಪ್ರಕೃತಿ ಧರ್ಮ.

ರಕ್ತ ವರ್ಗಾವಣೆ ಪ್ರಪಂಚದ ಎಲ್ಲಾ ಕಡೆ ಬಹಳಷ್ಟು ಜರುಗಿದೆ. ಮಾನವನು ತನ್ನ ಅಗತ್ಯಗಳಿಗೆ ಅನುಗುಣವಾಗಿ ಬೌದ್ಧಿಕತೆಯ ಮಟ್ಟ ಹೆಚ್ಚಿದಂತೆ ಪ್ರಪಂಚದ ಎಲ್ಲಾ ಮೂಲೆಗಳಿಗೂ ಕೆಲವು ಕಾರ್ಯನಿಮಿತ್ತ ಜೀವನ ಶೈಲಿ ನಿಮಿತ್ತ ಪ್ರವಾಸ ಕೈಗೊಳ್ಳುತ್ತಿದ್ದಾನೆ ಹಾಗೂ ಒಂದು ಪ್ರದೇಶದಲ್ಲಿ ಹುಟ್ಟಿದ ವ್ಯಕ್ತಿಯು ಇನ್ನೊಂದು ಪ್ರದೇಶದಲ್ಲಿ ಸಂಪೂರ್ಣವಾಗಿ ನೆಲೆಯೂರುತ್ತಿದ್ದಾನೆ, ಅಲ್ಲಿಯೇ ತನ್ನ ಇಡೀ ಬದುಕನ್ನು ಕಳೆಯುತ್ತಿದ್ದಾನೆ. ಈ ನಿಟ್ಟಿನಲ್ಲಿ ಪ್ರಾದೇಶಿಕತೆಯ ಬೆಸುಗೆ ಕೂಡ ಆಗುತ್ತಿದೆ. ಇಲ್ಲಿ ಆರ್ಯರು ಕೇವಲ ದ್ರಾವಿಡರೊಡನೆ ಹಾಗೂ ದ್ರಾವಿಡರು ಆರ್ಯರೊಡನೆ ಬೆರೆಯುತ್ತಿಲ್ಲ. ಜಗತ್ತಿನ ಇತರ ಜನಾಂಗಗಳಾದ ಕಕೇಶಿಯನ್, ಆಸ್ಟ್ರಾಲಾಯ್ಡಾ, ನೀಗ್ರೋಯಿಡ್, ಮಂಗೋಲಾಯ್ಡೋ ಜನಾಂಗಗಳೊಟ್ಟಿಗೆ ಬೆರೆಯುತ್ತಿದ್ದಾರೆ. ಪ್ರಪಂಚದ ಎಲ್ಲಾ ಜನಾಂಗಗಳಲ್ಲೂ ರಕ್ತ ವರ್ಗಾವಣೆಯ ಮಹಾ ಸಂಚಯನವು ಪ್ರಪಂಚವನ್ನು ಒಂದು ಬಗೆಯಲ್ಲಿ ಒಗ್ಗೂಡಿಸುತ್ತಿದೆ. ಇದು ನಿಧಾನ ಪ್ರಕ್ರಿಯೆಯಾದರೂ ಮುಂದಿನ ಶತಮಾನಗಳಲ್ಲಿ ಹೆಚ್ಚಿನ ಬೆರೆಯುವಿಕೆಗೆ ಸಾಧ್ಯವಾಗುತ್ತದೆ. ಉದಾಹರಣೆಗೆ ಭಾರತದಲ್ಲಿ ಹುಟ್ಟಿದ ದ್ರಾವಿಡಿಯನ್ ವ್ಯಕ್ತಿಯು ಮಂಗೋಲಾಯ್ಡಿ ಜನಾಂಗದವರೊಟ್ಟಿಗೆ ಬೆರೆಯುತ್ತಿರುವಾಗ ಅಂದರೆ ಆ ಪ್ರಾದೇಶಿಕತೆಯಲ್ಲಿ ಇರುವಾಗ ಆತನಿಗೇನಾದರೂ ಆರೋಗ್ಯದ ದೃಷ್ಟಿಯಲ್ಲಿ ತೊಂದರೆ ಉಂಟಾಗಿ ರಕ್ತದ ಅಗತ್ಯವಾದಾಗ ತಕ್ಷಣ ಅಲ್ಲಿನ ವೈದ್ಯರು ಈತ ಯಾವ ಜನಾಂಗದವನು ಎಂದು ನೋಡುವುದಿಲ್ಲ. ಬದಲಿಗೆ ರಕ್ತದ ಗುಂಪನ್ನಷ್ಟೇ ನೋಡುತ್ತಾರೆ ಅಲ್ಲಿನ ಮಂಗೋಲಾಯ್ಡಾ ಜನಾಂಗದ ವ್ಯಕ್ತಿಯ ರಕ್ತದ ಗುಂಪು ದ್ರಾವಿಡಿಯನ್ ವ್ಯಕ್ತಿಯ ರಕ್ತದ ಗುಂಪು ಒಂದೇ ಆದಾಗ ರಕ್ತದ ವರ್ಗಾವಣೆ ಆಗಿ ಜೀವ ವ್ಯವಸ್ಥೆಯ ಉಳಿಯುವಿಕೆ ಏರ್ಪಡುತ್ತದೆ. ಈ ಜೀವ ಉಳಿಸುವಿಕೆಯ ಕಾರ್ಯದ ಜೊತೆಗೆ ಕೊಡುಕೊಳ್ಳುವಿಕೆಯು ಸಾಕಷ್ಟು ನಡೆದಿರುತ್ತದೆ. ಅದೇ ಮಂಗೋಲಾಯ್ಡೆ ಜನಾಂಗದವನು ಕಕೇಶಿಯನ್ ಜನಾಂಗದವರ ಜೊತೆ ಸಂಬಂಧವನ್ನು ಮತ್ತು ಈ ರೀತಿಯ ರಕ್ತ ವರ್ಗಾವಣೆಯ ಪ್ರಕ್ರಿಯೆಗೆ ಒಳಪಟ್ಟರೆ ಅಲ್ಲೂ ಕೂಡ ಕೊಡುಕೊಳ್ಳುವಿಕೆ ಇನ್ನೂ ಹೆಚ್ಚಾಗಿ ನಡೆದಿರುತ್ತದೆ. ಇಲ್ಲಿ ರಕ್ತದ ಮೂಲಕವೇ ಎಲ್ಲಾ ಬಗೆಯ ಕೊಡುಕೊಳ್ಳುವಿಕೆ ನಡೆಯುತ್ತದೆ ಎಂದಲ್ಲ. ಈ ರೀತಿಯ ಬೆರೆಯುವಿಕೆಯಲ್ಲಿ ರಕ್ತ ವರ್ಗಾವಣೆಯ ಪಾತ್ರವನ್ನು ತಿಳಿಸಲಾಗುತ್ತಿದೆ ಅಷ್ಟೇ.

ಹೀಗೆ ಜಗತ್ತಿನ ಎಲ್ಲಾ ಜನಾಂಗದವರು ರಕ್ತ ಸಂಬಂಧಿಗಳಾಗುತ್ತಿದ್ದಾರೆ. ಆಯಾಯ ಪ್ರದೇಶದಲ್ಲಿ ಹುಟ್ಟಿದ ಜನಾಂಗದವರು ಅಲ್ಲಿನ ಪರಿಸರದಿಂದಾಗಿ ಪಡೆದಿದ್ದ ದೈಹಿಕ ಚಹರೆಗಳನ್ನು ಮತ್ತು ಸಮಾಜದ ಸಂಸ್ಕೃತಿಗಳನ್ನು ಎಲ್ಲೆಡೆ ಸಂಪರ್ಕವನ್ನು ಹೊಂದುವುದರ ಮೂಲಕ ಒಂದಾಗುವ ಪ್ರಕ್ರಿಯೆಗೆ ಯಾವಾಗಲೋ ವಿಜ್ಞಾನ ಸಂಶೋಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟಾಗಿದೆ. ಅದರ ಸಾಕಷ್ಟು ಬೆಳವಣಿಗೆಯನ್ನು ಗುರುತು ಹಚ್ಚಲು ನಿಂತರೆ ಈಗ ನಾವೆಲ್ಲರೂ ಒಂದೇ ಎನ್ನುವ ತೀರ್ಪು ಹೊರಬರುತ್ತದೆ. ನಾವು ಪ್ರಕೃತಿಯಿಂದ ಪಡೆದಿರುವ ಕೆಲವು ಭಿನ್ನ ಲಕ್ಷಣಗಳಿಂದ ನಮ್ಮನ್ನು ಪ್ರತ್ಯೇಕತೆಯಲ್ಲಿ ಗುರುತಿಸಿಕೊಂಡಿದ್ದೇವೆ ಆದರೆ ಪ್ರಕೃತಿಯು ಆಂತರಿಕ ಅಂಶಗಳಲ್ಲಿ ನಮ್ಮೆಲ್ಲರನ್ನೂ ಒಂದೇ ಎಂದು ಪರಿಗಣಿಸಿದೆ; ಇದೇ ಸತ್ಯ. ಮಾನವರು ಏನೇ ವೈಶಿಷ್ಟ್ಯಗಳಲ್ಲಿ ಪ್ರತ್ಯೇಕತೆಯನ್ನು ಬಯಸಿದರೂ ಭವಿಷ್ಯದಲ್ಲಿ ಅವೆಲ್ಲವೂ ನಶಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಪ್ರಕೃತಿಯಲ್ಲಿ ಒಂದಾಗುವುದೊಂದೇ ನಮ್ಮ ಮುಂದಿನ ದಿನಗಳಾಗಿದೆ. ಇದು ನಮಗರಿವಿಲ್ಲದೇ ನಮ್ಮಿಂದಲೇ ಆಗುವ ಪ್ರಕ್ರಿಯೆ ಆಗಿದೆ. ಇನ್ನೂ ಒಂದು ಮಾತು ಹೇಳುವುದಾದರೆ ನಮ್ಮಲ್ಲಿ ಈ ಕೊಡುಕೊಳ್ಳುವಿಕೆಯು ಈಗಿರುವ ಜಗತ್ತಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರವಾಗಿ ನಿಲ್ಲುವಷ್ಟು ಬದಲಾವಣೆಯ ಅಂಶಗಳನ್ನು ಒಳಗೊಂಡಿದೆ. ಈ ಬಗೆಯ ಬದಲಾವಣೆ ಒಮ್ಮೆಲೇ ಸಾಧ್ಯವಿಲ್ಲ. ತಾಳ್ಮೆವಹಿಸಿದರೆ ಈ ವರ್ಗಾವಣೆಗಳ ನಿರಂತರತೆಯಲ್ಲಿ ಸಾಧ್ಯತೆಯಾಗುತ್ತದೆ ಹಾಗೂ ಒಳ್ಳೆಯವುಗಳಿಗೆ ಕಾರಣವಾಗುತ್ತದೆ.

Writer - ಮಂಜುನಾಥ ಬಿ.ಆರ್., ಮೈಸೂರು

contributor

Editor - ಮಂಜುನಾಥ ಬಿ.ಆರ್., ಮೈಸೂರು

contributor

Similar News