×
Ad

ಗೂಗಲ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ರಾಜೀನಾಮೆ

Update: 2022-09-27 16:09 IST
ಅರ್ಚನಾ ಗುಲಾಟಿ (Photo: Twitter/@GoogleIndia)

ಹೊಸದಿಲ್ಲಿ: ಗೂಗಲ್ ಇಂಡಿಯಾದ(Google India) ಸರಕಾರಿ ವ್ಯವಹಾರಗಳ ಮತ್ತು ಸಾರ್ವಜನಿಕ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ(Archana Gulati) ಅವರು ಗೂಗಲ್‍ಗೆ ಸೇರಿದ ಐದೇ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದಾರೆ. ಈ ಹಿಂದೆ ಸರಕಾರಿ ಸೇವೆಯಲ್ಲಿದ್ದ ಗುಲಾಟಿ ಅವರ ರಾಜೀನಾಮೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ವರದಿಯಾಗಿದೆ.

ದಿಲ್ಲಿ ಐಐಟಿಯ ಅರ್ಥಶಾಸ್ತ್ರ ಪದವೀಧರೆ ಹಾಗೂ ಪಿಎಚ್ಡಿ ಪದವಿಯನ್ನು ಹೊಂದಿರುವ ಅರ್ಚನಾ ಗುಲಾಟಿ ಅವರು ಗೂಗಲ್‍ಗೆ ಸೇರುವ ಮುನ್ನ ನೀತಿ ಆಯೋಗದ ಜಂಟಿ ಕಾರ್ಯದರ್ಶಿ (ಡಿಜಿಟಲ್ ಕಮ್ಯುನಿಕೇಶನ್ಸ್) ಆಗಿ ಸೇವೆ ಸಲ್ಲಿಸಿದ್ದರು.

ಆಕೆಯ ರಾಜೀನಾಮೆ ಕುರಿತು ಗೂಗಲ್ ಇಂಡಿಯಾ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾರತದಲ್ಲಿ ಗೂಗಲ್ ಕಠಿಣ ನಿಯಂತ್ರಣಗಳು ಹಾಗೂ ಸರಣಿ ಆ್ಯಂಟಿ-ಟ್ರಸ್ಟ್ ಕೇಸ್‍ಗಳನ್ನು ಎದುರಿಸುತ್ತಿರುವ ಸಂದರ್ಭ ಈ ರಾಜೀನಾಮೆ ಬಂದಿದೆ.

ಈ ಹಿಂದೆ ಕಾಂಪಿಟೀಷನ್ ಕಮಿಷನ್ ಆಫ್ ಇಂಡಿಯಾದಲ್ಲೂ ಸೇವೆ ಸಲ್ಲಿಸಿರುವ ಅರ್ಚನಾ ಗುಲಾಟಿ ಅವರು ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ, ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹಾಗೂ ಆ್ಯಪ್ ಪಾವತಿ ವ್ಯವಸ್ಥೆಯಲ್ಲಿ ಗೂಗಲ್‍ನ ಬಿಸಿನೆಸ್ ನೀತಿಯನ್ನು ನೋಡಿಕೊಳ್ಳುತ್ತಿದ್ದರು.

ನೀತಿ ಆಯೋಗದಲ್ಲಿ ಆಗಸ್ಟ್ 2019 ರಿಂದ ಮಾರ್ಚ್ 2021 ರ ತನಕ ಸೇವೆ ಸಲ್ಲಿಸಿದ್ದ ಅರ್ಚನಾ ನಂತರ ಸ್ವಯಂನಿವೃತ್ತಿ ಪಡೆದುಕೊಂಡು ಗೂಗಲ್‍ಗಾಗಿ ಒಂದು ವರ್ಷ ಫ್ರೀಲಾನ್ಸ್ ಮಾಡಿದ ಬಳಿಕ ಈ ವರ್ಷದ ಮೇ ತಿಂಗಳಿನಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News