ದಾಖಲೆಗಳಲ್ಲಿಲ್ಲದ ಜಮೀನಿಗೆ ಪಾವತಿಸಿದ ಉತ್ತರ ಪ್ರದೇಶದ ಯಮುನಾ ಎಕ್ಸ್ ಪ್ರೆಸ್‍ವೇ ಪ್ರಾಧಿಕಾರ: ಸಿಎಜಿ ವರದಿ

Update: 2022-09-27 12:10 GMT
ಸಾಂದರ್ಭಿಕ ಚಿತ್ರ (PTI)

ನೊಯ್ಡಾ: ಉತ್ತರ ಪ್ರದೇಶ(Uttar Pradesh) ಸರಕಾರದ ಯಮುನಾ ಎಕ್ಸ್ ಪ್ರೆಸ್‍ವೇ( Yamuna Expressway) ಇಂಡಸ್ಟ್ರಿಯಲ್ ಡೆವಲೆಪ್ಮೆಂಟ್ ಅಥಾರಿಟಿ 2015 ರಲ್ಲಿ ಗೌತಮ್ ಬುದ್ಧ್ ನಗರದಲ್ಲಿ ಜಮೀನೊಂದನ್ನು ಖರೀದಿಸುವ ವೇಳೆ ಜಮೀನು ಸಂಬಂಧಿತ ದಾಖಲೆಗಳನ್ನು ಪರಾಮರ್ಶಿಸದೇ ಇದ್ದ ಕಾರಣ ಸರಕಾರಕ್ಕೆ ರೂ. 2.71 ಕೋಟಿ ನಷ್ಟವುಂಟಾಗಿದೆ ಎಂದು ಸಿಎಜಿ(CAG) ವರದಿ ಹೇಳಿದೆ. ಈ ಜಮೀನು ಖರೀದಿಸಲು ಸ್ಟ್ಯಾಂಪ್ ಡ್ಯೂಟಿಗಾಗಿ ಪ್ರಾಧಿಕಾರವು ಹೆಚ್ಚುವರಿ ರೂ 0.10 ಕೋಟಿ ಖರ್ಚು ಮಾಡಿದೆ ಆದರೆ ವಾಸ್ತವವಾಗಿ ಈ ಜಮೀನು ದಾಖಲೆಗಳಲ್ಲಿಲ್ಲ ಎಂದು ಸಿಎಜಿ ತನ್ನ ಆಡಿಟ್ ವರದಿಯಲ್ಲಿ ಹೇಳಿದೆ ಎಂದು ವರದಿಯಾಗಿದೆ.

ಈ ವರದಿಯನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇತ್ತೀಚೆಗೆ ಮಂಡಿಸಲಾಗಿದೆ. ಜಹಾಂಗೀರಪುರಿ ಗ್ರಾಮದಲ್ಲಿ ಯಮುನಾ ಎಕ್ಸ್ ಪ್ರೆಸ್‍ವೇ ಸಮೀಪದ ಗೌತಮ್ ಬುದ್ಧ್ ನಗರದಲ್ಲಿ  765 ಕೆವಿ ಸಬ್-ಸ್ಟೇಷನ್ ನಿರ್ಮಿಸಲು 75 ಎಕರೆ ಜಮೀನನ್ನು ಮಂಜೂರುಗೊಳಿಸುವಂತೆ ಪ್ರಾಧಿಕಾರಕ್ಕೆ ಉತ್ತರ ಪ್ರದೇಶದ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಜೂನ್ 2012 ರಲ್ಲಿ ಮನವಿ ಮಾಡಿತ್ತು.

ಜಮೀನು ಸ್ವಾಧೀನಕ್ಕೆ ಪ್ರಾಧಿಕಾರ ಕ್ರಮಕೈಗೊಂಡಿತಲ್ಲದೆ ಸೆಪ್ಟೆಂಬರ್ 2012 ರಲ್ಲಿ ಸಿಇಒ ಕೂಡ ಅನುಮೋದನೆ ನೀಡಿದ್ದರು. 150 ಖಸ್ರಾಗಳಲ್ಲಿ ಹರಡಿರುವ 54.365 ಹೆಕ್ಟೇರ್ ಜಮೀನು ಖರೀದಿಗಾಗಿ ಡಿಸೆಂಬರ್ 2012 ರಿಂದ ಡಿಸೆಂಬರ್ 2015 ರ ತನಕ 159 ಸೇಲ್ ಡೀಡ್‍ಗಳನ್ನು ಪ್ರಾಧಿಕಾರ ಮಾಡಿತ್ತು. ಆದರೆ ಆಡಿಟ್ ವೇಳೆ 150 ಖಸ್ರಾಗಳ ಪೈಕಿ  17 ಖಸ್ರಾಗಳಲ್ಲಿ 6.3990 ಹೆಕ್ಟೇರ್ ಗೆ ಮಾತ್ರ ಕಂದಾಯ ದಾಖಲೆಗಳು ಲಭ್ಯವಿದ್ದರೂ ದಾಖಲೆಗಳನ್ನು ಪರಿಶೀಲಿಸದೆ ಜಮೀನು ಖರೀದಿಸಿದ ಪರಿಣಾಮ ದಾಖಲೆಗಳಲ್ಲಿಲ್ಲದ ಹೆಚ್ಚುವರಿ 1.59035 ಹೆಕ್ಟೇರಿಗೆ ಹಣ ಪಾವತಿಸಲಾಗಿತ್ತು ಎಂದು ವರದಿ ಹೇಳಿದೆ.

ಈ ತಪ್ಪನ್ನು ಪ್ರಾಧಿಕಾರ ತನ್ನ ಜುಲೈ 2021 ರ ಉತ್ತರದಲ್ಲಿ ಒಪ್ಪಿಕೊಂಡಿತ್ತು ಎಂದು ಸಿಎಜಿ ವರದಿ ಹೇಳಿದೆ. ಸರಕಾರಕ್ಕೆ ಈ ಕುರಿತು ಮಾಹಿತಿಯನ್ನು ಮಾರ್ಚ್ 2021 ರಲ್ಲಿಯೇ ನೀಡಲಾಗಿತ್ತಾದರೂ ಉತ್ತರವಿನ್ನೂ ದೊರೆಯಬೇಕಿದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಗೂಗಲ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥೆ ಅರ್ಚನಾ ಗುಲಾಟಿ ರಾಜೀನಾಮೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News