75 ವರ್ಷದಲ್ಲಿ ಈ ಗ್ರಾಮದ ಯಾರಿಗೂ ಸರ್ಕಾರಿ ಉದ್ಯೋಗ ಸಿಕ್ಕಿಲ್ಲ !

Update: 2022-09-28 05:22 GMT

ಪಾಟ್ನಾ: ಬಿಹಾರದ ಮುಝಫ್ಫರ್‌ ಪುರ ಜಿಲ್ಲೆಯ ಕತ್ರ ತಾಲೂಕಿನ ಸೋಹಾಗ್‍ಪುರ ಎಂಬ ಪುಟ್ಟ ಗ್ರಾಮಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸರ್ಕಾರಿ ಉದ್ಯೋಗದ ಭಾಗ್ಯ ದೊರಕಿರಲಿಲ್ಲ. ಆದರೆ ಈ ಸುಧೀರ್ಘ ಕೊರಗು ನೀಗಿದ್ದು, ಗ್ರಾಮದ 25 ವರ್ಷದ ಯುವಕ ರಾಕೇಶ್ ಕುಮಾರ್ ಎಂಬವರಿಗೆ ಇದೀಗ ಸರ್ಕಾರಿ ಉದ್ಯೋಗ ದೊರಕಿದ್ದು, ಇಡೀ ಗ್ರಾಮವೇ ಸಂಭ್ರಮದಲ್ಲಿ ತೇಲಾಡಿದೆ.

ರಾಕೇಶ್‍ಗೆ ಸ್ಥಳೀಯ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇರ್ಪಡೆಗೊಳ್ಳುವಂತೆ ಆದೇಶ ಬಂದಿದೆ. "ನಮ್ಮ ಗ್ರಾಮದ ಯಾರೂ ಕಳೆದ 75 ವರ್ಷಗಳಲ್ಲಿ ಸರ್ಕಾರಿ ಉದ್ಯೋಗ ಪಡೆದಿಲ್ಲ. ಈ ಕೊರತೆಯನ್ನು ನೀಗಿಸಿ ವಿಶಿಷ್ಟ ದಾಖಲೆ ಸ್ಥಾಪಿಸುವುದು ನನ್ನ ಬಯಕೆಯಾಗಿತ್ತು" ಎಂದು ರಾಕೇಶ್ ಹೇಳಿದ್ದಾರೆ.

ಗ್ರಾಮದ ವ್ಯಕ್ತಿಯೊಬ್ಬ ಮೊದಲ ಬಾರಿಗೆ ಸರ್ಕಾರಿ ಉದ್ಯೋಗ ಪಡೆದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಇಡೀ ಗ್ರಾಮದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

ಆದರೆ ರಾಕೇಶ್ ಅವರ ಈ ಪಯಣ ಹಲವು ಕಷ್ಟಗಳಿಂದ ಕೂಡಿದ ಏಕಾಂಗಿ ಹೋರಾಟವಾಗಿತ್ತು. 19 ವರ್ಷದವರಿದ್ದಾಗ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ಶಿಕ್ಷಣದ ವೆಚ್ಚ ಭರಿಸುವ ಸಲುವಾಗಿ ಸ್ಥಳೀಯ ಮಕ್ಕಳಿಗೆ ಪಾಠ ಹೇಳುತ್ತಿದ್ದರು. ಯಾರು ಕೂಡಾ ಅವರ ನೆರವಿಗೆ ಬಂದಿರಲಿಲ್ಲ. "ನನ್ನ ಏಕೈಕ ಕನಸು ಸರ್ಕಾರಿ ಉದ್ಯೋಗ ಪಡೆಯುವುದಾಗಿತ್ತು. ಇದು ನನಗೆ ಕಠಿಣ ಪರಿಶ್ರಮ ವಹಿಸುವಂತೆ ಮಾಡಿತು" ಎಂದು ರಾಕೇಶ್ ಹೇಳಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News