ಪಿಎಫ್‍ಐ ನಿಲುವನ್ನು ವಿರೋಧಿಸುತ್ತೇನೆ ಆದರೆ ನಿಷೇಧ ಬೆಂಬಲಿಸುವುದಿಲ್ಲ: ಅಸದುದ್ದೀನ್ ಉವೈಸಿ

Update: 2022-09-28 12:35 GMT

ಹೈದರಾಬಾದ್: "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ(PFI) ದೃಷ್ಟಿಕೋನವನ್ನು ನಾನು ಯಾವತ್ತೂ ವಿರೋಧಿಸಿ ಪ್ರಜಾಪ್ರಭುತ್ವವಾದಿ ದೃಷ್ಟಿಕೋನವನ್ನು ಬೆಂಬಲಿಸಿದ್ದರೂ ಈ ಸಂಘಟನೆಯ ಮೇಲಿನ ನಿಷೇಧವನ್ನು ಬೆಂಬಲಿಸುವುದಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ(AIMIM chief Asaduddin Owaisi) ಹೇಳಿದ್ದಾರೆ

"ಕೆಲವು ವ್ಯಕ್ತಿಗಳು ಅಪರಾಧವೆಸಗಿದ್ದಾರೆ ಎಂಬ ಮಾತ್ರಕ್ಕೆ ಇಡೀ ಸಂಘಟನೆಯನ್ನೇ ನಿಷೇಧಿಸಬೇಕೆಂದೇನಿಲ್ಲ. ಒಂದು ಸಂಘಟನೆ ಜೊತೆ ನಂಟು ಹೊಂದಿದ್ದಾರೆಂಬ ಒಂದೇ ಕಾರಣವು ಒಬ್ಬನನ್ನು ದೋಷಿಯೆಂದು ಘೋಷಿಸಲು ಸಾಕಾಗದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ,'' ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಈ ರೀತಿಯ ನಿರಂಕುಶವಾದಿ ನಿಷೇಧ ಅಪಾಯಕಾರಿ ಏಕೆಂದರೆ ತನ್ನ ಮನಸ್ಸಿನಲ್ಲಿದ್ದುದನ್ನು ಹೇಳಲು ಬಯಸುವ ಯಾವುದೇ ಮುಸ್ಲಿಂ ವ್ಯಕ್ತಿಯ ಮೇಲಿನ ನಿಷೇಧ ಅದಾಗಿದೆ. ಭಾರತದ ಅಧಿಕಾರಸ್ಥರು ಫ್ಯಾಸಿಸಂ ಕುರಿತು ಕೈಗೊಳ್ಳುತ್ತಿರುವ ಕ್ರಮ ನೋಡಿದಾಗ, ಪ್ರತಿಯೊಬ್ಬ ಮುಸ್ಲಿಂ ಯುವಕನನ್ನು ಪಿಎಫ್‍ಐ ಕರಪತ್ರದೊಂದಿಗೆ ಭಾರತದ ಕರಾಳ ಕಾನೂನು ಯುಎಪಿಎ ಅಡಿಯಲ್ಲಿ ಬಂಧಿಸಲಾಗುವುದೆಂಬಂತೆ ತೋರುತ್ತಿದೆ,'' ಎಂದು ಅವರು ಹೇಳಿದರು.

"ಕೋರ್ಟುಗಳಿಂದ ನಿರಪರಾಧಿಗಳು ಎಂದು ಘೋಷಿಸುವ ಮೊದಲು ಹಲವಾರು ಮುಸ್ಲಿಮರು ದಶಕಗಳ ಕಾಲ ಜೈಲುಗಳಲ್ಲಿದ್ದರು. ನಾನು ಯಾವತ್ತೂ ಯುಎಪಿಎ ವಿರೋಧಿಸಿದ್ದೆ ಹಾಗೂ ಈ ಕಾಯಿದೆಯಡಿ ಕೈಗೊಳ್ಳುವ ಎಲ್ಲಾ ಕ್ರಮಗಳನ್ನೂ ವಿರೋಧಿಸುತ್ತೇನೆ. ಅದು ಸಂವಿಧಾನದ ಮೂಲ ರಚನೆಯ ಭಾಗವಾಗಿರುವ ಸ್ವಾತಂತ್ರ್ಯದ ತತ್ವಕ್ಕೆ ವಿರುದ್ಧವಾಗಿದೆ,'' ಎಂದು ಅವರು ಹೇಳಿದರು.

"ಈ ಕಾನೂನನ್ನು ತಿದ್ದುಪಡಿ ಮೂಲಕ ಕಾಂಗ್ರೆಸ್ ಸರಕಾರ ಕಠಿಣಗೊಳಿಸಿದ್ದರೆ ಬಿಜೆಪಿ ಸರಕಾರ ಇನ್ನಷ್ಟು ಕಠಿಣಗೊಳಿಸಿತ್ತು ಹಾಗೂ ಕಾಂಗ್ರೆಸ್ ಅದನ್ನು ಬೆಂಬಲಿಸಿತ್ತು,'' ಎಂದು ಹೇಳಿದ ಉವೈಸಿ, ಕಪ್ಪನ್ ಪ್ರಕರಣ ಉಲ್ಲೇಖಿಸಿ, "ಯಾವುದೇ ಹೋರಾಟಗಾರ ಅಥವಾ ಪತ್ರಕರ್ತನನ್ನು ಬಂಧಿಸಿದರೆ ಜಾಮೀನು ಸಿಗಲು ಎರಡು ವರ್ಷ ಬೇಕಾಗುತ್ತದೆ,'' ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಇಬ್ಬರು ಮಲಯಾಳಂ ನಟಿಯರಿಗೆ ಮಾಲ್‍ನಲ್ಲಿ ಲೈಂಗಿಕ ಕಿರುಕುಳ: ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News