ಉದ್ಯೋಗಿಗಳು ಆಪ್ ಪರ ಪ್ರಚಾರ ನಡೆಸುವುದನ್ನು ತಡೆದಿದ್ದ ಸೂರತ್ ವಜ್ರೋದ್ಯಮಿ ಬಿಜೆಪಿಗೆ ಸೇರ್ಪಡೆ

Update: 2022-09-28 12:29 GMT

Photo: Twitter/@CRPaatil

ಅಹ್ಮದಾಬಾದ್: ತನ್ನ ಉದ್ಯೋಗಿಗಳು ಆಮ್ ಆದ್ಮಿ ಪಕ್ಷದ(AAP) ಪರ ಪ್ರಚಾರ ಕೈಗೊಳ್ಳುವುದಕ್ಕೆ ತಡೆ ಹೇರಿದ್ದ ಗುಜರಾತ್‍ನ ಸೂರತ್ ನಗರದ ವಜ್ರೋದ್ಯಮಿ(Gujarat Diamond Merchant) ದಿಲೀಪ್ ಧಾಪಾ ಎಂಬವರು ಬಿಜೆಪಿ(BJP) ಸೇರಿದ್ದಾರೆ. ಪಕ್ಷದ ಮುಖ್ಯ ಕಾರ್ಯಾಲಯ 'ಶ್ರೀ ಕಮಲಂ' ನಲ್ಲಿ ಮಂಗಳವಾರ ಸಂಜೆ  ದಿಲೀಪ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಈ ಕುರಿತ ಫೋಟೋ ಅನ್ನು ಗುಜರಾತ್ ಬಿಜೆಪಿ ಅಧ್ಯಕ್ಷ ಸಿ ಆರ್ ಪಾಟೀಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

"ವಜ್ರೋದ್ಯಮಿ ದಿಲೀಪ್ ಧಾಪಾ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇನೆ ಅವರು ತಮ್ಮ ಉದ್ಯೋಗಿಗಳು ರೇವ್ಡಿ ಮಾರಾಟಗಾರನ ಪಕ್ಷಕ್ಕೆ ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಿದ್ದರಲ್ಲದೆ ತಮ್ಮ ಆದೇಶ ಧಿಕ್ಕರಿಸುವವರನ್ನು ಕೆಲಸದಿಂದ ತೆಗೆದುಹಾಕಲಾಗುವುದೆಂದು ಎಚ್ಚರಿಸಿದ್ದರು. ಅವರು ಇದನ್ನು ಸ್ವಯಂಇಚ್ಛೆಯಿಂದ ಮಾಡಿದ್ದರು,'' ಎಂದು ಪಾಟೀಲ್ ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಜನರ ಸ್ವಾತಂತ್ರ್ಯವನ್ನು ಕಸಿಯಲು ಯತ್ನಿಸುವ ಒಬ್ಬ ವ್ಯಕ್ತಿಯನ್ನು ಶ್ಲಾಘಿಸಿದ್ದಕ್ಕೆ ಪಾಟೀಲ್ ಅವರನ್ನು ಆಪ್ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಇಸುದಾನ್ ಗಧ್ವಿ ಟೀಕಿಸಿದ್ದಾರೆ.

"ಆಯ್ಕೆ ಮಾಡುವ ಜನರ ಹಕ್ಕನ್ನು ಕಸಿದ ವ್ಯಕ್ತಿಯನ್ನು ಸನ್ಮಾನಿಸುವ ಮೂಲಕ ಗುಜರಾತ್ ಅನ್ನು ಗೂಂಡಾ-ರಾಜ್ ಮಾಡಬೇಕೆಂದಿದ್ದೀರಾ?'' ಎಂದು ಗಧ್ವಿ ಟ್ವೀಟ್ ಮಾಡಿದ್ದಾರೆ.

ಗುಜರಾತ್‍ನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಲವು ಸವಲತ್ತುಗಳನ್ನು ನೀಡುವ ಕುರಿತು ಆಪ್ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದರು.

ಇದನ್ನೂ ಓದಿ: ಪ್ರಧಾನಿಗೂ ನನ್ನ ರಾಜಕೀಯ ಜೀವನ ಅಂತ್ಯಗೊಳಿಸಲು ಸಾಧ್ಯವಿಲ್ಲ: ಪಂಕಜಾ ಮುಂಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News