ವಿದ್ಯುತ್ ಮಾರ್ಗ ಬದಲಾವಣೆಗೆ ಕಾಳಾವರ ಗ್ರಾಮಸಭೆಯಲ್ಲಿ ಆಗ್ರಹ

Update: 2022-09-28 12:42 GMT

ಕುಂದಾಪುರ, ಸೆ.28: ವಾರಾಹಿ ಯೋಜನೆಯ ಕಾಮಗಾರಿ ಹಾದು ಹೋಗು ವಾಗ ಇಲಾಖೆಗಳು ಪಂಚಾಯತ್‌ಗೆ ಲಿಖಿತ ರೂಪದಲ್ಲಿ ಕಾಮಗಾರಿ ಮತ್ತು ಪರಿಹಾರದ ಕುರಿತು ನೋಟಿಸ್‌ಗಳನ್ನು ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದವು. ಆದರೆ ಮೆಸ್ಕಾಂ ಇಲಾಖೆ ಮಾಡುತ್ತಿರುವ ಜನಾಭಿಪ್ರಾಯವಿಲ್ಲದ ಯೋಜನೆಯ ಕುರಿತು ಯಾವುದೇ ಮಾಹಿತಿಯನ್ನು ಸ್ಥಳೀಯಾಡಳಿತದ ಗಮನಕ್ಕೆ ತಾರದೇ ಏಕಾಏಕಿ ಅಪಾಯಕಾರಿ ವಿದ್ಯುತ್ ಲೈನ್ ಮತ್ತು ಗೋಪುರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾಳಾವರ ಗ್ರಾಪಂ ಉಪಾಧ್ಯಕ್ಷ ರಾಮ ಚಂದ್ರ ನಾವುಡ ಆರೋಪಿಸಿದ್ದಾರೆ.

ಕೆಪಿಟಿಸಿಎಲ್ ನೇತೃತ್ವದಲ್ಲಿ ಹೆಗ್ಗುಂಜೆಯಿಂದ ಕುಂದಾಪುರಕ್ಕೆ ಹಾದುಹೋಗುವ ೧೧೦ಕೆವಿ ವಿದ್ಯುತ್ ಮಾರ್ಗವು ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಳಾವರ ಮತ್ತು ಅಸೋಡು ಗ್ರಾಮದ ಮೂಲಕ ಹಾದು ಹೋಗಲಿದ್ದು ಈ ಕುರಿತು ಸ್ಥಳೀಯರಿಗೆ ಆಗುವ ತೊಂದರೆಗಳ ಕುರಿತು ಕಾಳಾವರ ಗ್ರಾಪಂ ವತಿಯಿಂದ ವರದ ರಾಜ ಶೆಟ್ಟಿ ಹಾಲ್‌ನಲ್ಲಿ ಸೋಮವಾರ ನಡೆದ ವಿಶೇಷ ಗ್ರಾಮಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಮಾಜಿ ತಾಪಂ ಸದಸ್ಯ ದೀಪಕ್ ಕುಮಾರ್ ಶೆಟ್ಟಿ ಮಾತನಾಡಿ, ಸರಕಾರದ ಯೋಜನೆಗಳಿಗಾಗಿ ರೈತರ ಕೃಷಿ ಭೂಮಿಗಳನ್ನು ಬಳಸಿಕೊಳ್ಳುವಾಗ ಆ ಜಾಗಕ್ಕೆ 4 ಪಟ್ಟು ಪರಿಹಾರವನ್ನು ನೀಡಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಗಳನ್ನು ರೂಪಿಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಸ್ಥಳೀಯಾಡಳಿತ ಮತ್ತು ಸಾರ್ವಜನಿಕರನ್ನು ಕಡೆಗಣಿಸಿ ಇಲಾಖೆ ಕಾಮಗಾರಿ ನಡೆಸಲು ಮುಂದಾಗಿರುವುದು ಯಾವುದೋ ಲಾಭಿ ಎಂಬಂತೆ ಕಂಡುಬರುತ್ತಿದೆ ಎಂದು ದೂರಿದರು.  

ಗ್ರಾಪಂ ಸದಸ್ಯ ರಮೇಶ್ ಶೆಟ್ಟಿ ವಕ್ವಾಡಿ ಮಾತನಾಡಿ, ಈ ಯೋಜನೆಯನ್ನು ಮೆಸ್ಕಾಂ ಇಲಾಖೆ ಸಿದ್ದಪಡಿಸಿಕೊಳ್ಳುವ ಮೊದಲು ಸ್ಥಳೀಯಾಡಳಿತದ ಅನುಮತಿ ಪಡೆಯದೇ ಹಾಗೂ ಗಮನಕ್ಕೆ ತಾರದೇ ಏಕಾಏಕಿ ಕಾಮಗಾರಿ ಮಾಡಲು ಹೊರಟಿದೆ. ಸ್ಥಳೀಯಾಡಳಿತವನ್ನು ನಿರ್ಲಕ್ಷಿಸಿ ಯಾವುದೇ ಮಾಹಿತಿ ನೀಡದೇ ಕೆಪಿಟಿಸಿಎಲ್ ಮಾಡುವ ಕಾಮಗಾರಿಗೆ ಸಾರ್ವಜನಿಕರ ಜೊತೆಯಲ್ಲಿ ಪಂಚಾಯತ್ ಸರ್ವ ಸದಸ್ಯರು ಕೈಜೋಡಿಸಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಯ ಲೈನ್‌ಗಳನ್ನು ಮುಂದೆ ಹೋಗದಂತೆ ತೆಡೆದು ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನಿವೃತ್ತ ಶಿಕ್ಷಕ ಬಾಲಕೃಷ್ಣ ಶೆಟ್ಟಿ, ಸ್ಥಳೀಯರಾದ ಸುಧೀರ್, ನಿವೃತ್ತ ಶಿಕ್ಷಣ ಇಲಾಖೆಯ ಅಧಿಕಾರಿ ದಯಾನಂದ ಹೆಗ್ಡೆ ಮಾತನಾಡಿದರು.  ಅಧ್ಯಕ್ಷತೆಯನ್ನು ಕಾಳಾವರ ಗ್ರಾಪಂ ಅಧ್ಯಕ್ಷೆ ಆಶಾಲತಾ ಶೆಟ್ಟಿ ವಹಿಸಿದ್ದರು. ಕೆಪಿಟಿಸಿಎಲ್ ಎಕ್ಸಿಕ್ಯೂಟೀವ್ ಎಂಜಿನಿಯರ್ ಭಾರತಿ, ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಎಂಜಿನಿ ಯರ್ ದಿವಾಕರ್ ಐತಾಳ್, ಕಾಳಾವರ ವಿಎ ಆನಂದ, ಅಸೋಡು ವಿಎ ಸೀಮಾ ಕುಲಾಲ್, ಗ್ರಾಪಂ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಪಿಡಿಒ ಪಾಂಡುರಂಗ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

ಮಾರ್ಗ ಬದಲಾಯಿಸಿ, ಇಲ್ಲವೇ ವಿಷ ನೀಡಿ!

ಪಂಚಾಯತ್ ಅನುಮತಿ ಪಡೆದು ಈಗಾಗಲೇ ಲಕ್ಷಗಟ್ಟಲೇ ಸಾಲ ಮಾಡಿ ಜಾಗ ಖರೀದಿ ಮಾಡಿ ಸಣ್ಣ ಕೈಗಾರಿಕೆ ಮತ್ತು ವಸತಿ ವ್ಯವಸ್ಥೆ ಮಾಡಿಕೊಂಡಿ ದ್ದೇವೆ. ಇದನ್ನು ನಂಬಿ ಹಲವು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂತಹ ಯೋಜನೆಯನ್ನು ಯಾರ ಗಮನಕ್ಕೂ ತಾರದೇ ಏಕಾಏಕಿ ತರುವ ಬದಲಿಗೆ ನಮಗೊಂದು ವಿಷ ನೀಡಿ ಸುಮ್ಮನಿದ್ದು ಬಿಡಿ ಎಂದು ಉದ್ಯಮಿ ಸಂತೋಷ ಪೂಜಾರಿ ನೋವು ತೋಡಿಕೊಂಡರು.  

ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ತಾಂತ್ರಿಕತೆಯನ್ನು ಬಳಸಿಕೊಂಡು ಯೋಜನೆಯ ಮಾರ್ಗವನ್ನು ರೂಪಿಸಿದ್ದಾರೆ. ಒಣ ಭೂಮಿ ಎಂದು ತಪ್ಪು ಮಾಹಿತಿಯನ್ನು ಇಲಾಖೆ ನಮೂದಿಸಿದೆ. ನೀರಿನ ಸೆಳೆತ ಇರುವ ಜಾಗದಲ್ಲಿ ಟವರ್ ನಿರ್ಮಾಣ ಮಾಡಿದಲ್ಲಿ ಸಂಭವ್ಯ ಅಪಘಡಗಳಿಗೆ ಹೊಣೆ ಯಾರು? ವಿದ್ಯುತ್ ಲೈನ್ ಹಾದು ಹೋಗುವ ಸ್ಥಳಗಳಲ್ಲಿ ಮನೆಗಳಿಲ್ಲ ಎಂದು ಸುಳ್ಳು ಮಾಹಿತಿ ನೀಡಿದೆ. ಬಿ ಲೈನ್ ಕಾನೂನು ಬಿಟ್ಟು ಜಿಗ್‌ಜಾಗ್ ರೀತಿಯಲ್ಲಿ ವಿದ್ಯುತ್ ಲೈನ್ ಹೋಗುತ್ತಿದೆಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News