ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕಿಳಿದ ಗೌತಮ್ ಅದಾನಿ

Update: 2022-09-28 12:44 GMT
ಗೌತಮ್ ಅದಾನಿ (File Photo: PTI)

ಹೊಸದಿಲ್ಲಿ,ಸೆ.28: ಫೋರ್ಬ್ಸ್ ರಿಯಲ್-ಟೈಮ್ ಬಿಲಿಯಾಧೀಶರ ಪಟ್ಟಿಯಲ್ಲಿ (Forbes Rich List) ಭಾರತೀಯ ಕೈಗಾರಿಕೋದ್ಯಮಿ ಗೌತಮ್ ಅದಾನಿಯವರು(Gautam Adani) ಬುಧವಾರ ಮತ್ತೆ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಲೂಯಿಸ್ ವಿಟಾನ್ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ಅವರು ಎರಡನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದು, ಈ ಇಬ್ಬರ ಸಂಪತ್ತಿನ ನಡುವೆ ಸುಮಾರು ಶತಕೋಟಿ ಡಾಲರ್‌ಗಳ ಅಂತರವಿದೆ.

ಕಳೆದ ಹಲವು ದಿನಗಳಿಂದ ಭಾರತೀಯ ಶೇರು ಮಾರುಕಟ್ಟೆಗಳು ಕುಸಿತದ ಹಾದಿಯಲ್ಲಿವೆ, ಪರಿಣಾಮವಾಗಿ ಅದಾನಿಯವರ ನಿವ್ವಳ ಸಂಪತ್ತು 1.27 ಶತಕೋಟಿ ಡಾ.ಗಳಷ್ಟು ಕರಗಿದ್ದು, ಈಗ 140.2 ಶತಕೋಟಿ ಡಾ.ಗಳಷ್ಟಾಗಿದೆ. ಅರ್ನಾಲ್ಟ್‌ರ ನಿವ್ವಳ ಸಂಪತ್ತು 141.2 ಶತಕೋಟಿ ಡಾ.ಗಳಷ್ಟಿದೆ.

ಇದೇ ವೇಳೆ ವಾಲ್‌ಸ್ಟ್ರೀಟ್‌ನಲ್ಲಿ ಶೇರುಗಳು ಇನ್ನಷ್ಟು ಕುಸಿದಿದ್ದರೂ ನಂ.1 ಸ್ಥಾನದಲ್ಲಿರುವ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ನಿವ್ವಳ ಸಂಪತ್ತು 259.8 ಶತಕೋಟಿ ಡಾ.ಗಳಿಗೇರಿದೆ. ವಾಲ್ ಸ್ಟ್ರೀಟ್‌ನ ಸೂಚ್ಯಂಕ ಎಸ್ ಆ್ಯಂಡ್ ಪಿ 500 2020ರಿಂದೀಚಿಗೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಆದರೆ ಭಾರತೀಯ ಶೇರು ಮಾರುಕಟ್ಟೆಗಳು ಸತತ ಏಳನೇ ದಿನವಾದ ಬುಧವಾರವೂ ನಷ್ಟದಲ್ಲಿದ್ದು, ಶೇರುಗಳು ತೀವ್ರ ಕುಸಿತವನ್ನು ಅನುಭವಿಸುತ್ತಿವೆ.

ಆರ್ಥಿಕ ಹಿಂಜರಿತದ ಅಪಾಯವಿದ್ದರೂ ಹೆಚ್ಚುತ್ತಿರುವ ಹಣದುಬ್ಬರದ ವಿರುದ್ಧ ತನ್ನ ಹೋರಾಟದಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಕಠಿಣ ನೀತಿಗಳನ್ನು ಪುನರುಚ್ಚರಿಸಿದ ಬಳಿಕ ಶೇರು ಮಾರುಕಟ್ಟೆಗಳು ಪತನದ ಹಾದಿಯಲ್ಲಿವೆ.

ಅಮೆಝಾನ್ ಮುಖ್ಯಸ್ಥ ಜೆಫ್ ಬೆರೆಸ್ 138 ಶತಕೋಟಿ ಡಾ.ನಿವ್ವಳ ಸಂಪತ್ತಿನೊಂದಿಗೆ ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ರಿಲಯನ್ಸ್ ಇಂಡಸ್ಟ್ರೀಸ್‌ನ ಮುಕೇಶ್ ಅಂಬಾನಿ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಇಬ್ಬರು ಮಲಯಾಳಂ ನಟಿಯರಿಗೆ ಮಾಲ್‍ನಲ್ಲಿ ಲೈಂಗಿಕ ಕಿರುಕುಳ: ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News