ದಸರಾ ಉಡುಗೊರೆ: 47 ಲಕ್ಷ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಏರಿಕೆ

Update: 2022-09-28 12:50 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಕೇಂದ್ರ ಸರಕಾರಿ ನೌಕರರು (central government employees) ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (Dearness allowance) ಶೇ.4ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟವು ಬುಧವಾರ ಹಸಿರು ನಿಶಾನೆಯನ್ನು ತೋರಿಸುವ ಮೂಲಕ ದಸರಾ ಉಡುಗೊರೆಯನ್ನು ನೀಡಿದೆ. ತುಟ್ಟಿಭತ್ಯೆ ಏರಿಕೆಯು ಈ ವರ್ಷದ ಜುಲೈ 1ರಿಂದಲೇ ಪೂರ್ವಾನ್ವಯಗೊಳ್ಳಲಿವೆ.

ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯ ಸಭೆಯು ಬೆಲೆಏರಿಕೆಗೆ ಪರಿಹಾರವಾಗಿ ತುಟ್ಟುಭತ್ಯೆಯ ಹೆಚ್ಚುವರಿ ಕಂತನ್ನು ಬಿಡುಗಡೆಗೊಳಿಸುವ ಪ್ರಸ್ತಾವವನ್ನು ಒಪ್ಪಿಕೊಂಡಿತು.

ಸರಕಾರದ ಘೋಷಣೆಯಿಂದ ಸುಮಾರು 47.68 ಲಕ್ಷ ಕೇಂದ್ರ ಸರಕಾರಿ ನೌಕರರು ಮತ್ತು 68.62 ಲ.ಪಿಂಚಣಿದಾರರಿಗೆ ಲಾಭವಾಗಲಿದೆ. ತುಟ್ಟಿಭತ್ಯೆ ಹೆಚ್ಚಳವು ನಾಗರಿಕ ಸೇವೆಯಲ್ಲಿರುವ ಮತ್ತು ರಕ್ಷಣಾ ಸೇವೆಗಳಲ್ಲಿರುವ ಉದ್ಯೋಗಿಗಳಿಗೆ ಅನ್ವಯವಾಗಲಿದೆ.

ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 6,591.36 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನು ಅಂದಾಜಿಸಲಾಗಿದೆ ಮತ್ತು ಜುಲೈ,2022ರಿಂದ ಫೆಬ್ರವರಿ 2023ರವರೆಗೆ 2022-23ನೇ ವಿತ್ತವರ್ಷದಲ್ಲಿ 4,394.24 ಕೋ.ರೂ.ಗಳ ಹೆಚ್ಚುವರಿ ಹೊರೆಯುಂಟಾಗಲಿದೆ.

ಪಿಂಚಣಿದಾರರಿಗೆ ತುಟ್ಟಿ ಪರಿಹಾರವನ್ನು ಹೆಚ್ಚಿಸಿರುವುದು ಸರಕಾರದ ಬೊಕ್ಕಸಕ್ಕೆ ವಾರ್ಷಿಕ 6,261.20 ಕೋ.ರೂ.ಗಳ ಹೆಚ್ಚುವರಿ ಹೊರೆಯನ್ನು ಅಂದಾಜಿಸಲಾಗಿದೆ ಮತು 2022-23ನೇ ವಿತ್ತವರ್ಷದಲ್ಲಿ 4,174.12 ಕೋ.ರೂ.ಗಳ ಹೆಚ್ಚುವರಿ ಹೊರೆಯುಂಟಾಗಲಿದೆ.

ಇದನ್ನೂ ಓದಿ: ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮತ್ತೆ 3ನೇ ಸ್ಥಾನಕ್ಕಿಳಿದ ಗೌತಮ್ ಅದಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News