ಅವಸರದಿಂದ ರೆಸಾರ್ಟ್ ಧ್ವಂಸಗೊಳಿಸಿದ್ದು ಸಾಕ್ಷ್ಯಗಳನ್ನು ನಾಶಗೊಳಿಸಿರಬಹುದು: ಉತ್ತರಾಖಂಡದ ಮಾಜಿ ಡಿಜಿಪಿ

Update: 2022-09-28 13:35 GMT
Photo: PTI

ಡೆಹ್ರಾಡೂನ್: ಅಂಕಿತಾ ಭಂಡಾರಿ (Ankita Bhandari) ಕೊಲೆ ಪ್ರಕರಣದ ಮುಖ್ಯ ಆರೋಪಿ ಪುಲ್ಕಿತ್ ಆರ್ಯಗೆ ಸೇರಿದ ರೆಸಾರ್ಟ್‌ನ್ನು ಧ್ವಂಸಗೊಳಿಸಲು ಅವಸರಿಸಿದ್ದು ಮಹತ್ವದ ಸಾಕ್ಷ್ಯಗಳನ್ನು ನಾಶಗೊಳಿಸರಬೇಕು ಎಂದು ಉತ್ತರಾಖಂಡದ ಮಾಜಿ ಡಿಜಿಪಿ ಅಲೋಕ್ ಬಿ.ಲಾಲ್(Former Uttarakhand DGP Aloke B. Lal) ಹೇಳಿದ್ದಾರೆ ಎಂದು ವರದಿಯಾಗಿದೆ.

ಪೌಡಿ ಜಿಲ್ಲೆಯ ಭೋಗಪುರದಲ್ಲಿಯ ರೆಸಾರ್ಟ್‌ನ್ನು ಆಡಳಿತವು ರಾತ್ರೋರಾತ್ರಿ ಧ್ವಂಸಗೊಳಿಸಿದ್ದು ಕೊಲೆ ಪ್ರಕರಣದಲ್ಲಿಯ ಸಾಕ್ಷ್ಯಗಳನ್ನು ನಾಶಮಾಡುವ ಪ್ರಯತ್ನವಾಗಿತ್ತು ಎಂಬ ಆರೋಪಗಳು ವಿವಿಧ ವಲಯಗಳಿಂದ ಕೇಳಿಬಂದಿವೆ.

‘ಅಕ್ರಮ ರೆಸಾರ್ಟ್ ಎನ್ನಲಾಗಿರುವ ಕಟ್ಟಡವನ್ನು ನೆಲಸಮಗೊಳಿಸುವಾಗ ಸೂಕ್ತ ವಿಧಿವಿಧಾನಗಳನ್ನು ಅನುಸರಿಸಲಾಗಿಲ್ಲ ಎಂಬಂತೆ ನನಗೆ ಕಂಡು ಬಂದಿದೆ. ಸಾಮಾನ್ಯವಾಗಿ ಇಂತಹ ಕಾರ್ಯಾಚರಣೆಗೆ ಮುನ್ನ ಶೋಕಾಸ್ ನೋಟಿಸನ್ನು ಹೊರಡಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಯಾವುದೇ ಪೂರ್ವಭಾವಿ ನೋಟಿಸ್ ನೀಡದೇ ರಾತ್ರೋರಾತ್ರಿ ಬುಲ್ಡೋಜರ್‌ಗಳ ಮೂಲಕ ರೆಸಾರ್ಟ್‌ನ್ನು ನೆಲಸಮಗೊಳಿಸಲಾಗಿದೆ. ಈ ದಿಢೀರ್ ಕ್ರಮವು ಸಾಕ್ಷಗಳನ್ನು ನಾಶಗೊಳಿಸಿರಲೇಬೇಕು’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ ಲಾಲ್, ತನ್ನನ್ನು ಪರಿಣಾಮಕಾರಿ ಎಂದು ಬಿಂಬಿಸಿಕೊಳ್ಳಲು ಆಡಳಿತದ ಅತಿಯಾದ ಉತ್ಸಾಹವು ಈ ರಾತ್ರಿ ಕಾರ್ಯಾಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ಆರೋಪಿಯ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತೋರಿಸಿಕೊಳ್ಳುವುದು ಆಡಳಿತದ ಗುರಿಯಾಗಿತ್ತು ಎಂಬಂತೆ ಕಂಡು ಬರುತ್ತಿದೆ ಎಂದರು.

ಆರೋಪಿಗಳೇ ಸ್ವಯಂ ನೆಲಸಮ ಕಾರ್ಯಾಚರಣೆಯನ್ನು ನಡೆಸಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ ಅವರು, ನಿಜವಾಗಿಯೂ ಯಾರು ನೆಲಸಮ ಕಾರ್ಯಾಚರಣೆ ನಡೆಸಿದ್ದು ಮತ್ತು ಯಾರ ಆದೇಶದಿಂದ ಎನ್ನುವುದನ್ನು ತನಿಖೆಯು ಸಾಬೀತುಗೊಳಿಸಲಿದೆ ಎಂದಿದ್ದಾರೆ.

ನೆಲಸಮಗೊಳಿಸುವುದಕ್ಕೆ ಎರಡು ದಿನಗಳ ಮೊದಲು,ಸೆ.22ರಂದೇ ರೆಸಾರ್ಟ್‌ನ ವೀಡಿಯೊ ಚಿತ್ರೀಕರಣ ನಡೆಸಲಾಗಿತ್ತು ಮತ್ತು ಎಲ್ಲ ಪುರಾವೆಗಳು ಹಾಗೆಯೇ ಇರುವುದನ್ನು ವೀಡಿಯೊ ತುಣುಕು ತೋರಿಸಿದೆ ಎಂಬ ಪೌಡಿ ಜಿಲ್ಲಾಡಳಿತದ ಹೇಳಿಕೆಯ ಕುರಿತಂತೆ ಲಾಲ್, ಕೂದಲಿನ ಎಳೆ, ಬೆವರು, ಜೊಲ್ಲು ಅಥವಾ ವೀರ್ಯದ ಹನಿಗಳಂತಹ ನಿರ್ಣಾಯಕ ವಿಧಿವಿಜ್ಞಾನ ಸಾಕ್ಷ್ಯಗಳನ್ನು ವೀಡಿಯೊಗ್ರಫಿಯು ದಾಖಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ರೆಸಾರ್ಟ್‌ನಲ್ಲಿಯ ಸಿಸಿಟಿವಿ ಕ್ಯಾಮೆರಾಗಳು ದಾಖಲಿಸಿದ್ದ ತುಣುಕು ಎಲ್ಲಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, ಅಲ್ಲಿ ಘರ್ಷಣೆಗೆ ಮುನ್ನ ಏನು ನಡೆದಿತ್ತು ಎನ್ನುವುದನ್ನು ಸಾಬೀತುಗೊಳಿಸುವ ಪ್ರಮುಖ ಸಾಕ್ಷ್ಯ ಖಂಡಿತವಾಗಿಯೂ ಅದರಲ್ಲಿದೆ ಎಂದರು.

ಪ್ರಕರಣವನ್ನು ಕಂದಾಯ ಪೊಲೀಸರಿಂದ ಸಾಮಾನ್ಯ ಪೊಲೀಸರಿಗೆ ವರ್ಗಾಯಿಸುವುದರಲ್ಲಿ ವಿಳಂಬವೂ ವಿಷಯವನ್ನು ಅಸ್ಪಷ್ಟವಾಗಿಸಿದೆ, ಇದು ತಪ್ಪಿತಸ್ಥರನ್ನು ರಕ್ಷಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ಜನರು ಭಾವಿಸಬಹುದು. ಕಂದಾಯ ಪೊಲೀಸರಿಗೆ ಕೊಲೆ ಪ್ರಕರಣವನ್ನು ನಿರ್ವಹಿಸುವ ತರಬೇತಿ ಇರುವುದಿಲ್ಲ,ಅಗತ್ಯ ಉಪಕರಣಗಳೂ ಇರುವುದಿಲ್ಲ. ನಾಲ್ಕು ದಿನಗಳ ಕಾಲ ಪ್ರಕರಣವನ್ನು ಅವರ ಬಳಿ ಬಿಟ್ಟಿದ್ದೇಕೆ? ಕೊಲೆ ಪ್ರಕರಣಗಳು ಸಮಯಸೂಕ್ಷ್ಮವಾಗಿರುತ್ತವೆ. ವಿಳಂಬವು ಸಾಕ್ಷನಷ್ಟಕ್ಕೆ ಕಾರಣವಾಗುತ್ತದೆ ಮತ್ತು ಪ್ರಕರಣವನ್ನು ಭೇದಿಸುವುದು ಹೆಚ್ಚು ಕಷ್ಟವಾಗುತ್ತದೆ ಎಂದರು.

ತಾನು 2001-02ರಲ್ಲಿ ಡಿಜಿಪಿಯಾಗಿದ್ದಾಗ ಶಿಲಾಯುಗದ ಕಂದಾಯ ಪೊಲೀಸ್ ವ್ಯವಸ್ಥೆಗೆ ಅಂತ್ಯ ಹಾಡುವಂತೆ ಸರಕಾರಕ್ಕೆ ಪತ್ರ ಬರೆದಿದ್ದೆ, ಆದರೆ ದುರದೃಷ್ಟವಶಾತ್ ಉತ್ತರಾಖಂಡದಲ್ಲಿ ಅದು ಈಗಲೂ ಮುಂದುವರಿದಿದೆ ಎಂದು ಲಾಲ್ ಹೇಳಿದರು.

ಇದನ್ನೂ ಓದಿ: ಪಿಎಫ್‍ಐ ನಿಲುವನ್ನು ವಿರೋಧಿಸುತ್ತೇನೆ ಆದರೆ ನಿಷೇಧ ಬೆಂಬಲಿಸುವುದಿಲ್ಲ: ಅಸದುದ್ದೀನ್ ಉವೈಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News