ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್(ನಿ.) ಅನಿಲ್ ಚೌಹಾಣ್ ನೇಮಕ

Update: 2022-09-28 17:53 GMT
ಲೆಫ್ಟಿನೆಂಟ್ ಜನರಲ್(ನಿ.) ಅನಿಲ್ ಚೌಹಾಣ್ (Photo: Twitter/@ndtv)

ಹೊಸದಿಲ್ಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿದ ಒಂಬತ್ತು ತಿಂಗಳ ನಂತರ, ಕೇಂದ್ರ ಸರ್ಕಾರವು ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥ(CDS)ರಾಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಅನಿಲ್ ಚೌಹಾಣ್ (Lt General Anil Chauhan (Retired)) ಅವರನ್ನು ನೇಮಿಸಿದೆ.

ಲೆಫ್ಟಿನೆಂಟ್ ಜನರಲ್ ಚೌಹಾಣ್ ಅವರು ಮೇ 2021 ರಲ್ಲಿ ನಿವೃತ್ತರಾಗಿದ್ದರು. ಚೌಹಾಣ್‌ ಅವರು ಹಲವಾರು ಸೇನಾ ಹುದ್ದೆಗಳನ್ನು ಅಲಂಕರಿಸಿದ ಅನುಭವ ಹೊಂದಿದ್ದಾರೆ. ವಿಶೇಷವಾಗಿ, ಜಮ್ಮು ಮತ್ತು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ ದಂಗೆ-ವಿರೋಧಿ ಕಾರ್ಯಾಚರಣೆಗಳಲ್ಲಿ ಚೌಹಾಣ್‌ ಅವರು ಅನುಭವವನ್ನು ಹೊಂದಿದ್ದಾರೆ.

ಭಾರತದ ಮೊದಲ ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥರಾಗಿದ್ದ ಜನರಲ್ ರಾವತ್ ಮತ್ತು ಅವರ ಪತ್ನಿ ಡಿಸೆಂಬರ್‌ನಲ್ಲಿ ತಮಿಳುನಾಡಿನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿದ್ದ ಇತರ 13 ಮಂದಿ ಕೂಡಾ ಮೃತಪಟ್ಟಿದ್ದರು.  

ಜನರಲ್ ರಾವತ್ ಅವರು 2020 ರ ಜನವರಿಯಲ್ಲಿ ಭಾರತದ ಮೊದಲ ಸಶಸ್ತ್ರ ಸೇನಾ ಪಡೆಗಳ ಮುಖ್ಯಸ್ಥ (CDS) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೇವೆಗಳನ್ನು ಸಂಯೋಜಿಸಲು ಈ ಸ್ಥಾನವನ್ನು ರಚಿಸಲಾಗಿದೆ.

1961 ಮೇ 18ರಂದು ಜನಿಸಿದ ಅನಿಲ್ ಚೌಹಾಣ್ ಅವರು ಭಾರತೀಯ ಸೇನೆಯ 11 ಗೂರ್ಖಾ ರೈಫಲ್ಸ್‌ಗೆ 1981ರಲ್ಲಿ ನಿಯೋಜಿತರಾಗಿದ್ದರು. ಅವರು ಖಡಕ್‌ವಾಸ್ಲಾದ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ, ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯ ಹಳೆ ವಿದ್ಯಾರ್ಥಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News