ಇಂದ್ರಾಳಿ ಸೇತುವೆ ಕಾಮಗಾರಿ: ಭಾರೀ ವಾಹನಗಳಿಗೆ ಪರ್ಯಾಯ ಮಾರ್ಗ

Update: 2022-09-28 15:38 GMT
ಫೈಲ್‌ ಫೋಟೊ 

ಉಡುಪಿ, ಸೆ.28: ಸಂಚಾರಕ್ಕೆ ಸಂಪೂರ್ಣ ಹದಗೆಟ್ಟು, ಸಾರ್ವಜನಿಕರು, ಸಂಘಸಂಸ್ಥೆಗಳ ಧರಣಿ, ಪ್ರತಿಭಟನೆಗಳಿಗೆ ಕಾರಣವಾದ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿ ಇರುವ ಕಾಂಕ್ರಿಟೀಕರಣ ಕಾಮಗಾರಿ ಅ.1ರಿಂದ ಪ್ರಾರಂಭಗೊಳ್ಳಲಿದ್ದು, ಇದಕ್ಕಾಗಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಭಾರೀ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 169ಎ ಯಲ್ಲಿ 76.040ಕಿ.ಮೀ.ನಿಂದ 85.200 ಕಿ.ಮೀ. ವರೆಗಿನ ಚತುಷ್ಪಥ ಕಾಮಗಾರಿ ಇಂದ್ರಾಳಿ ರೈಲ್ವೆ ಸೇತುವೆ ಬಳಿ ಬಾಕಿ ಇದ್ದು,  ಕಾಂಕ್ರಿಟೀಕರಣ ಕಾಮಗಾರಿಯನ್ನು ಅ.1ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದಲ್ಲಿ ಸಂಚರಿಸುವ ಬಗ್ಗೆ ಶೃಂಗೇರಿಯ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರ ಕೋರಿಕೆಯಂತೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಧಿಸೂಚನೆ ಹೊರಡಿಸಿದ್ದಾರೆ.

ಅ.1ರಿಂದ ನವೆಂಬರ್ 14ರವರೆಗೆ ಒಟ್ಟು 45 ದಿನಗಳ ಕಾಲ ದ್ವಿಚಕ್ರ, ಕಾರುಗಳು ಹಾಗೂ ಬಸ್ಸುಗಳನ್ನು ಹೊರತುಪಡಿಸಿ ಭಾರೀ ವಾಹನ ಸಂಚಾರವನ್ನು ನಿರ್ಬಂಧಿಸಿ, ಬದಲೀ ಮಾರ್ಗದಲ್ಲಿ ಸಂಚರಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ನಿರ್ಬಂಧಿತ ವಾಹನಗಳಿಗೆ ಪರ್ಯಾಯ ಮಾರ್ಗದ ವಿವರ ಹೀಗಿದೆ...

*ಕುಂದಾಪುರ ಕಡೆಯಿಂದ ಬರುವ ಘನವಾಹನಗಳು ಅಂಬಾಗಿಲು- ಪೆರಂಪಳ್ಳಿ- ಮಣಿಪಾಲ ರಸ್ತೆಯ ಮೂಲಕ ಚಲಿಸಬೇಕು.

*ಉಡುಪಿಯಿಂದ ಬರುವ ಘನವಾಹನಗಳು ಕಲ್ಸಂಕ ಜಂಕ್ಷನ್ ಬಳಿ ಎಡ ತಿರುವು ಪಡೆದು ಗುಂಡಿಬೈಲು ರಸ್ತೆಯ ಮೂಲಕ ಎ.ವಿ.ಬಾಲಿಗ ಆಸ್ಪತ್ರೆ ಬಳಿ ಯಿಂದ ಪೆರಂಪಳ್ಳಿ ರಸ್ತೆಯ ಮೂಲಕ ಮಣಿಪಾಲಕ್ಕೆ ಸಂಚರಿಸಬೇಕು.

*ಕಾರ್ಕಳ, ಹಿರಿಯಡ್ಕದಿಂದ ಬರುವ ಘನ ವಾಹನಗಳು ಮಣಿಪಾಲ- ಪೆರಂಪಳ್ಳಿ- ಅಂಬಾಗಿಲು ರಸ್ತೆ ಮೂಲಕ ಚಲಿಸಬೇಕು.

*ಉಡುಪಿಯಿಂದ ಮಣಿಪಾಲಕ್ಕೆ ತೆರಳುವ ದ್ವಿಚಕ್ರ ವಾಹನ, ಕಾರುಗಳು ಮತ್ತು ಬಸ್ಸುಗಳು ಹಾಲಿ ಇಂದ್ರಾಳಿ ಸೇತುವೆ ಮೇಲೆ ಏಕಮುಖ ನಿರ್ಬಂಧಿತ ರೀತಿಯಲ್ಲಿ ಚಲಿಸಬೇಕು ಎಂದು ಆದೇಶದಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News