ಮರಣದಂಡನೆಗೆ ಗುರಿಯಾಗಿರುವ ರಾಜೋನಾ ಕುರಿತು ನಿರ್ಧಾರದ ಕೊರತೆಗಾಗಿ ಸರಕಾರಕ್ಕೆ ಸುಪ್ರೀಂ ತರಾಟೆ

Update: 2022-09-28 16:40 GMT

ಹೊಸದಿಲ್ಲಿ, ಸೆ.28: ತಾನು 26 ವರ್ಷಗಳಷ್ಟು ಸುದೀರ್ಘ ಕಾಲದಿಂದ ಜೈಲಿನಲ್ಲಿರುವುದರಿಂದ 1995ರ ಮಾಜಿ ಪಂಜಾಬ್ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಬೇಕು ಎಂದು ಕೋರಿ ಬಲವಂತ ಸಿಂಗ್ ರಾಜೋನಾ ಸಲ್ಲಿಸಿರುವ ಅರ್ಜಿಯ ಕುರಿತು ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳದಿದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಬುಧವಾರ ಕೇಂದ್ರ ಸರಕಾರವನ್ನು ತರಾಟೆಗೆತ್ತಿಕೊಂಡಿತು.

ಪ್ರಕರಣವನ್ನು ಮುಂದೂಡುವಂತೆ ಕೇಂದ್ರದ ಪರ ವಕೀಲರು ಮಂಡಿಸಿದ್ದ ಕೋರಿಕೆಯ ಬಗ್ಗೆಯೂ ಸರ್ವೋಚ್ಚ ನ್ಯಾಯಾಲಯವು ಅಸಮಾಧಾನವನ್ನು ವ್ಯಕ್ತಪಡಿಸಿತು.

ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದ ಇತರ ದೋಷಿಗಳು ಸಲ್ಲಿಸಿರುವ ಮೇಲ್ಮನವಿಗಳು ಬಾಕಿ ಇವೆ ಎನ್ನುವ ಅಂಶದಿಂದ ಪ್ರಭಾವಿತಗೊಳ್ಳದೆ ರಾಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ಕುರಿತು ಎರಡು ತಿಂಗಳುಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಮೇ 2ರಂದು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಿತ್ತು.

 ಗಡುವು ಎಂದೋ ಮುಗಿದಿದೆ. ಆದಾಗ್ಯೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ ಅವರು ತಿಳಿಸಿದ್ದಂತೆ ಸಂಬಂಧಿತ ಪ್ರಾಧಿಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಜೆ.ಬಿ.ಪರ್ಡಿವಾಲಾ ಅವರ ಪೀಠವು,ಅಫಿಡವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಸೂಚಿಸಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.

‘ನಾವು ನಿರ್ದೇಶನ ಹೊರಡಿಸಿದ ತಕ್ಷಣ ದಯಾಯಾಚನೆ ಅರ್ಜಿಯನ್ನು ಅವರು ಪರಿಶೀಲಿಸಬೇಕು. ಇದಕ್ಕೆ ಹೊಣೆಗಾರರಾಗಿರುವ ಅಧಿಕಾರಿ ಯಾರು? ಈ ವಿಷಯಕ್ಕೆ ಸಂಬಂಧಿಸಿದಂತೆ ಟಿಪ್ಪಣಿಯನ್ನು ಸಿದ್ಧಪಡಿಸಲಾಗಿದೆಯೇ? ಇಂತಹುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ನಾವು ನಿಮ್ಮನ್ನು ಬಲವಂತಗೊಳಿಸಲು ಸಾಧ್ಯವಿಲ್ಲ. ಆದರೆ ನೀವು ನಿರ್ಧಾರವೊಂದನ್ನು ತೆಗೆದುಕೊಳ್ಳಲೇಬೇಕು ’ ಎಂದು ನ್ಯಾ.ಲಲಿತ್ ಹೇಳಿದರು.

2019ರಲ್ಲಿ ಗುರು ನಾನಕ್‌ರ 550ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ತನ್ನ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ತಗ್ಗಿಸುವ ನಿರ್ಧಾರವನ್ನು ಕೇಂದ್ರ ಸರಕಾರವು ಪ್ರಕಟಿಸಿತ್ತು ಎಂದು 2020ರಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ತಿಳಿಸಿದ್ದ ರಾಜೋನಾ,ನಿರ್ಧಾರದ ಅನುಷ್ಠಾನಕ್ಕಾಗಿ ಕೋರಿಕೊಂಡಿದ್ದ. ತನ್ನ ದಯಾಯಾಚನೆ ಅರ್ಜಿಯನ್ನು ಪರಿಶೀಲಿಸುವಲ್ಲಿ ಸುದೀರ್ಘ ವಿಳಂಬವನ್ನು ಪರಿಗಣಿಸುವಂತೆಯೂ ಆತ ಪರ್ಯಾಯ ಕೋರಿಕೆಯನ್ನು ಸಲ್ಲಿಸಿದ್ದ.

1995,ಆ.31ರಂದು ಪಂಜಾಬ್ ಸಿವಿಲ್ ಸೆಕ್ರೆಟರಿಯೇಟ್ ಹೊರಗೆ ಬಿಯಾಂತ್ ಸಿಂಗ್ ಮತ್ತು ಇತರ 16 ಜನರನ್ನು ಬಲಿ ತೆಗೆದುಕೊಂಡಿದ್ದ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದಕ್ಕಾಗಿ ಮಾಜಿ ಪಂಜಾಬ ಪೊಲೀಸ್ ಕಾನ್‌ಸ್ಟೇಬಲ್ ರಾಜೋನಾನನ್ನು ದೋಷಿಯೆಂದು 2007ರಲ್ಲಿ ಎತ್ತಿ ಹಿಡಿದಿದ್ದ ವಿಶೇಷ ನ್ಯಾಯಾಲಯವು ಮರಣದಂಡನೆಯನ್ನು ವಿಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News