ಬಿಲ್ಕಿಸ್ ಬಾನು ಪ್ರಕರಣದ ತಪ್ಪಿತಸ್ಥರಿಗೆ ಕ್ಷಮಾದಾನ ಅಮಾನವೀಯ: 400ಕ್ಕೂ ಅಧಿಕ ಗಣ್ಯರು

Update: 2022-09-28 16:55 GMT

ಹೊಸದಿಲ್ಲಿ, ಸೆ.28: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಲ್ಲ 11 ತಪ್ಪಿತಸ್ಥರ ಬಿಡುಗಡೆಯು ಅಮಾನವೀಯ ಮತ್ತು ಅನೈತಿಕ ಪೂರ್ವನಿದರ್ಶನವನ್ನು ಸ್ಥಾಪಿಸಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರು,ಮಾಜಿ ಸರಕಾರಿ ಅಧಿಕಾರಿಗಳು ಮತ್ತು ಕಲಾವಿದರು ಸೇರಿದಂತೆ 401 ಗಣ್ಯರನ್ನೊಳಗೊಂಡ ಗುಂಪು ಬುಧವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಗುಜರಾತ್ ಗಲಭೆಗಳ ಸಂದರ್ಭ 2002, ಮಾ.3ರಂದು ಅಹ್ಮದಾಬಾದ್ ಸಮೀಪದ ಗ್ರಾಮದಲ್ಲಿ 11 ಜನರು ಆಗ 19 ವರ್ಷದವಳಾಗಿದ್ದ ಮೂರು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನುವಿನ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಿದ್ದರು. ಬಾನುವಿನ ಮೂರು ವರ್ಷದ ಮಗಳು ಸೇರಿದಂತೆ ಆಕೆಯ ಕುಟುಂಬದ 14 ಸದಸ್ಯರೂ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದರು.

ಹೇಳಿಕೆಗೆ ಸಹಿ ಹಾಕಿದವರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜವಾಹರ ಸರ್ಕಾರ್,ನಟಿ ನಫೀಸಾ ಅಲಿ,ಪತ್ರಕರ್ತ ಪರಂಜಯ ಗುಹಾ ಥಾಕುರ್ತಾ,ಛಾಯಾಚಿತ್ರಗ್ರಾಹಕ ರಘು ರಾಯ್ ಮತ್ತು ಗಾಯಕಿ ಶುಭಾ ಮುದ್ಗಲ್ ಸೇರಿದ್ದಾರೆ. ಕ್ಷಮಾದಾನವನ್ನು ಹಿಂದೆಗೆದುಕೊಳ್ಳುವಂತೆ ಅವರು ಸರಕಾರವನ್ನು ಆಗ್ರಹಿಸಿದ್ದಾರೆ.

ಸ್ವಾತಂತ್ರ ದಿನದಂದು ತಪ್ಪಿತಸ್ಥರನ್ನು ಬಿಡುಗಡೆಗೊಳಿಸಿದ ನಿರ್ಧಾರವು ಹೆಚ್ಚು ಅಮಾನವೀಯವಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News