ಗುಜರಾತ್‌ 2002 ಗಲಭೆ ಪ್ರಕರಣ: ಮಾಜಿ ಐಪಿಎಸ್‌ ಅಧಿಕಾರಿ ಶ್ರೀಕುಮಾರ್‌ ಗೆ ಮಧ್ಯಂತರ ಜಾಮೀನು

Update: 2022-09-28 17:50 GMT
ಆರ್‌.ಬಿ. ಶ್ರೀಕುಮಾರ್‌

ಅಹ್ಮದಾಬಾದ್: ಗುಜರಾತ್ ಹೈಕೋರ್ಟ್ ಬುಧವಾರ, ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್‌.ಬಿ. ಶ್ರೀಕುಮಾರ್‌ಗೆ ನಕಲಿ ಸಾಕ್ಷ್ಯ ಮತ್ತು ಕೃತ್ರಿಮ ಸಾಕ್ಷ್ಯದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಸಹ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ.

ಶ್ರೀಕುಮಾರ್ ಅವರ ಆರೋಗ್ಯ ಸ್ಥಿತಿ ಸರಿಯಿಲ್ಲ ಮತ್ತು ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಜಾಮೀನು ಅರ್ಜಿಯಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿ ಇಲೇಶ್ ಜೆ ವೋರಾ ಅವರ ಏಕ ಸದಸ್ಯ ಪೀಠವು ನವೆಂಬರ್ 15 ರವರೆಗೆ ಮಧ್ಯಂತರ ಜಾಮೀನು ನೀಡಿದೆ. 2002ರ ಗುಜರಾತ್ ಗಲಭೆಯಲ್ಲಿ ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಗುಜರಾತ್ ಪೊಲೀಸರು ಜೂನ್ 25ರಂದು ಶ್ರೀಕುಮಾರ್ ಅವರನ್ನು ಬಂಧಿಸಿದ್ದರು.

2002 ರ ಹಿಂಸಾಚಾರದ ಸಂದರ್ಭದಲ್ಲಿ ಕೊಲ್ಲಲ್ಪಟ್ಟ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಅವರು ಗುಜರಾತ್ ಗಲಭೆಗಳ ಹಿಂದಿನ ದೊಡ್ಡ ಪಿತೂರಿಯ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಅವರನ್ನು ಬಂಧಿಸಲಾಗಿತ್ತು.

ಪ್ರಕರಣದಲ್ಲಿ ಎಸ್‌ಐಟಿ ಸಲ್ಲಿಸಿದ ಮುಕ್ತಾಯ ವರದಿಯನ್ನು ಅಂಗೀಕರಿಸುವ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಎತ್ತಿಹಿಡಿಯುವ 2017 ರ ಹೈಕೋರ್ಟ್ ತೀರ್ಪನ್ನು ಜಾಫ್ರಿ ಪ್ರಶ್ನಿಸಿದ್ದರು.

ಶ್ರೀಕುಮಾರ್ ವಿರುದ್ಧ ಸೆಕ್ಷನ್ 194 (ಸುಳ್ಳು ಪುರಾವೆಗಳನ್ನು ನೀಡುವುದು ಅಥವಾ ನಿರ್ಮಿಸುವುದು), 211 (ಅಪರಾಧದ ಸುಳ್ಳು ಆರೋಪ), 218 (ತಪ್ಪಾದ ದಾಖಲೆಯನ್ನು ರಚಿಸುವ ಸಾರ್ವಜನಿಕ ಸೇವಕ), 468 (ವಂಚನೆಯ ಉದ್ದೇಶಕ್ಕಾಗಿ ನಕಲಿ ದಾಖಲೆ), 471 (ನಕಲಿ ದಾಖಲೆಯನ್ನು ಬಳಸುವುದು) ಮತ್ತು ಭಾರತೀಯ ದಂಡ ಸಂಹಿತೆಯ (IPC) 120B (ಕ್ರಿಮಿನಲ್ ಪಿತೂರಿ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News