ಬೊಜ್ಜು, ಹಸಿವಿನ ಸಮಸ್ಯೆ ನಿವಾರಣೆಗೆ ಶತಕೋಟಿ ಡಾಲರ್ ಯೋಜನೆ ಘೋಷಿಸಿದ ಅಮೆರಿಕ

Update: 2022-09-28 18:39 GMT

ವಾಷಿಂಗ್ಟನ್, ಸೆ.28: ಅಮೆರಿಕ ಎದುರಿಸುತ್ತಿರುವ ಅವಳಿ ಸವಾಲುಗಳಾದ ಸ್ಥೂಲಕಾಯತೆ ಮತ್ತು ಹಸಿವಿನ ಸಮಸ್ಯೆಯನ್ನು ಅಂತ್ಯಗೊಳಿಸಲು ಪ್ರಮುಖ ಸಂಸ್ಥೆಗಳ ನೆರವಿನೊಂದಿಗೆ ಬಹು ಮಿಲಿಯ ಡಾಲರ್ ಮೊತ್ತದ ಯೋಜನೆಯನ್ನು ಶ್ವೇತಭವನ ಬುಧವಾರ ಘೋಷಿಸಿದೆ.

ಅಮೆರಿಕದ ಸುಮಾರು 42% ವಯಸ್ಕರು ಸ್ಥೂಲಕಾಯವನ್ನು ಹೊಂದಿದ್ದಾರೆ ಮತ್ತು ಅಮೆರಿಕದ ಸುಮಾರು 10% ಕುಟುಂಬ ಆಹಾರ ಅಭದ್ರತೆಯಿಂದ ಬಳಲುತ್ತಿರುವುದಾಗಿ ಅಮೆರಿಕ ಸರಕಾರದ ಅಂಕಿಅಂಶ ಹೇಳಿದೆ. ಈ ಹಿನ್ನೆಲೆಯಲ್ಲಿ, ಅವಳಿ ಸವಾಲುಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೈಡನ್ ಸರಕಾರ ಆಹಾರ, ಪೌಷ್ಟಿಕಾಂಶ ಮತ್ತು ಆಹಾರ ಪದ್ಧತಿ(ಪಥ್ಯ)ದ ಕುರಿತು ಶೃಂಗಸಭೆಯನ್ನು ಆಯೋಜಿಸಿದೆ. 

ಅಮೆರಿಕದಲ್ಲಿ 2030ರೊಳಗೆ ಹಸಿವು ಹಾಗೂ ಆಹಾರ ಪದ್ಧತಿಗೆ ಸಂಬಂಧಿಸಿದ ಕಾಯಿಲೆಗಳನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸರಕಾರ, ಸಂಸತ್ತು, ಖಾಸಗಿ ಸಂಸ್ಥೆಗಳು ಹಾಗೂ ಸಮಾಜ ಜತೆಗೂಡಿ ಕಾರ್ಯನಿರ್ವಹಿಸುವ ಅಗತ್ಯವನ್ನು ಶೃಂಗಸಭೆಯಲ್ಲಿ ಬೈಡನ್ ಪ್ರತಿಪಾದಿಸಲಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಆಹಾರ ಪದ್ಧತಿಗೆ ಸಂಬಂಧಿಸಿದ ಇಂತಹ ಬೃಹತ್ ಯೋಜನೆಗೆ ಸಂಸತ್ ನಿಧಿ ಒದಗಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ , ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಬಳಸಿಕೊಂಡು ಈ ಯೋಜನೆಯಲ್ಲಿ ಖಾಸಗಿ ವಲಯದ ಬೃಹತ್ ಸಂಸ್ಥೆಗಳನ್ನು ತೊಡಗಿಸಿಕೊಳ್ಳುವ ಪ್ರಯತ್ನದಲ್ಲಿ  ಬೈಡನ್ ಯಶಸ್ವಿಯಾಗಿದ್ದಾರೆ ಮತ್ತು ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಡೀ ಸಮಾಜದ ಪ್ರತಿಕ್ರಿಯೆಗಳನ್ನು ಒಟ್ಟುಗೂಡಿಸಿದರೆ ಮಾತ್ರ ನಾವು ಯಶಸ್ವಿಯಾಗಲಿದ್ದೇವೆ ಎಂಬುದು ನಮಗೆ ತಿಳಿದಿದೆ. ಆಸ್ಪತ್ರೆಗಳಿಂದ ಟೆಕ್ ಸಂಸ್ಥೆಗಳವರೆಗೆ ಸರಕಾರ ಮತ್ತು ಖಾಸಗಿ ಕ್ಷೇತ್ರದ  100ಕ್ಕೂ ಅಧಿಕ ಸಂಘಟನೆಗಳು 8 ಶತಕೋಟಿ ಡಾಲರ್ ನೆರವಿನ ವಾಗ್ದಾನ ನೀಡಿವೆ  ಎಂದು ಅಧಿಕಾರಿಗಳು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News