ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆ, ಕರುಳಿನಿಂದ 63 ಚಮಚ ಹೊರತೆಗೆದ ವೈದ್ಯರು !

Update: 2022-09-29 03:01 GMT

ಮೀರಠ್: ಮುಝಫ್ಫರ್‌ ನಗರದ ವ್ಯಕ್ತಿಯೊಬ್ಬನ ಹೊಟ್ಟೆ ಮತ್ತು ಕರುಳಿನಿಂದ 63 ತುದಿ ಇಲ್ಲದ ಚಮಚಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಕುತೂಹಲಕಾರಿ ಘಟನೆ ನಡೆದಿದೆ.

ಮೀರಠ್‍ನ ಖಾಸಗಿ ಆಸ್ಪತ್ರೆಯ ವೈದ್ಯರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ರೋಗಿಯ ಆರೋಗ್ಯ ಸ್ಥಿತಿ ಇದೀಗ ಸ್ಥಿರವಾಗಿದ್ದು, ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.

"ಮುಝಫ್ಫರ್‌ ನಗರ ಜಿಲ್ಲೆಯ ಬೋಪಾರ ಗ್ರಾಮದ ವಿಜಯ್ ಚೌಹಾಣ್ ಎಂಬ ವ್ಯಕ್ತಿ ಹದಿನೈದು ದಿನ ಹಿಂದೆ ಹೊಟ್ಟೆ ನೋವಿನ ಸಮಸ್ಯೆಗಾಗಿ ಆಗಮಿಸಿದ್ದ. ತಪಾಸಣೆ ಮಾಡುವ ವೇಳೆ ಆತನ ಹೊಟ್ಟೆಯಲ್ಲಿ ಬಾಹ್ಯ ವಸ್ತುಗಳು ಇರುವ ಸಾಧ್ಯತೆ ಕಂಡುಬಂತು ಹಾಗೂ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದೆವು" ಎಂದು ಸರ್ಜನ್ ಡಾ.ರಾಜೇಶ್ ಖುರನ ವಿವರ ನೀಡಿದ್ದಾರೆ.

"ತೀವ್ರ ಹೊಟ್ಟೆನೋವಿನೊಂದಿಗೆ ಮತ್ತೆ ಆತ ಆಸ್ಪತ್ರೆಗೆ ಬಂದಾಗ ನಾವು ಮರು ತಪಾಸಣೆ ನಡೆಸಿದೆವು. ಚಮಚದಂಥ ವಸ್ತು ಇರುವುದು ದೃಢಪಟ್ಟಿತು. ರವಿವಾರ ನಾವು ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 62 ಹಾಗೂ ಕರುಳಿನಿಂದ ಒಂದು ತುದಿ ಇಲ್ಲದ ಚಮಚಗಳನ್ನು ತೆಗೆದಿದ್ದೇವೆ. ಇದು ನಾನು ವೃತ್ತಿಯಲ್ಲಿ ಕಂಡ ಮೊದಲ ಇಂಥ ಪ್ರಕರಣ" ಎಂದು ಬಣ್ಣಿಸಿದ್ದಾರೆ.

ಮಾದಕವಸ್ತು ವ್ಯಸನಿಯಾಗಿದ್ದ ರೋಗಿ, ಶಾಮ್ಲಿಯ ಪುನರ್ವಸತಿ ಕೇಂದ್ರದಲ್ಲಿ ಏಳು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ರೋಗಿ ವಿರೋಧಾಭಾಸದ ಹೇಳಿಕೆ ನೀಡುತ್ತಿರುವುದರಿಂದ ಆತನ ಹೊಟ್ಟೆಯಲ್ಲಿ ಅಷ್ಟೊಂದು ಚಮಚಾ ಸೇರಿದ್ದು ಹೇಗೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ಚಮಚಗಳನ್ನು ತಿನ್ನುವಂತೆ ಪುನರ್ವಸತಿ ಕೇಂದ್ರಗಳ ಸಿಬ್ಬಂದಿ ಬಲವಂತಪಡಿಸಿದ್ದಾರೆ ಎಂದು ಒಮ್ಮೆ ಹೇಳಿದರೆ, ತಾನೇ ಚಮಚಗಳನ್ನು ತಿನ್ನುತ್ತಿದ್ದುದಾಗಿ ಮತ್ತೊಮ್ಮೆ ಹೇಳುತ್ತಿದ್ದಾನೆ. ರೋಗಿಗೆ ಪ್ರಜ್ಞೆ ಮರುಕಳಿಸಿದ ಬಳಿಕ ನಿಜ ಪತ್ತೆಯಾಗಬೇಕು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News