ಅಂಕಿತಾ ಭಂಡಾರಿ ಕೊಲೆ ಪ್ರಕರಣ: ಮಹಿಳಾ ಆಯೋಗದಿಂದ ತನಿಖೆಯ ಮೇಲ್ವಿಚಾರಣೆಗಾಗಿ ಸಮಿತಿ ರಚನೆ

Update: 2022-09-29 14:58 GMT
The National Commission for Women (NCW)

ಡೆಹ್ರಾಡೂನ್,ಸೆ.29: ಉತ್ತರಾಖಂಡ ರಾಜ್ಯ ಮಹಿಳಾ ಆಯೋಗವು ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಮತ್ತು ಅದರ ಎಲ್ಲ ಅಂಶಗಳ ಮೇಲೆ ನಿಗಾಯಿರಿಸಲು ಸಮಿತಿಯೊಂದನ್ನು ರಚಿಸಿದೆ. ಇದೊಂದು ಅತ್ಯಂತ ಸೂಕ್ಷ್ಮವಿಷಯವಾಗಿದೆ ಮತ್ತು ತುರ್ತು ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ. ಪ್ರಕರಣದಲ್ಲಿ ತನಿಖೆಯ ಮೇಲೆ ನಿಕಟ ನಿಗಾಯಿರಿಸಲು ವಿಶೇಷ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಆಯೋಗದ ಅಧ್ಯಕ್ಷೆ ಕುಸುಮ್ ಕಂಡ್ವಾಲ್ ತಿಳಿಸಿದರು.

ಯಮ್ಕೇಶ್ವರ ಉಪವಿಭಾಗಾಧಿಕಾರಿ,ಪೌಡಿ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಮತ್ತು ಲಕ್ಷ್ಮಣ ಝೂಲಾ ಪೊಲೀಸ್ ಠಾಣೆಯ ಪಿಎಸ್ಐ ಅವರನ್ನು ಒಳಗೊಂಡಿರುವ ಸಮಿತಿಯು ತನಿಖೆಯಲ್ಲಿನ ಪ್ರಗತಿಯ ಕುರಿತು ಆಯೋಗಕ್ಕೆ ಮಾಹಿತಿಗಳನ್ನು ನೀಡುತ್ತಿರುತ್ತದೆ ಎಂದರು.

ಉತ್ತರಾಖಂಡದ ಹೃಷಿಕೇಶ ಸಮೀಪದ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿ ರೆಸಾರ್ಟ್‌ನ ಮಾಲಿಕ ಪುಲ್ಕಿತ್ ಆರ್ಯ ಮತ್ತು ಇಬ್ಬರು ಸಿಬ್ಬಂದಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಪುಲ್ಕಿತ್ ಬಿಜೆಪಿಯಿಂದ ಉಚ್ಚಾಟಿತ ನಾಯಕ ವಿನೋದ ಆರ್ಯರ ಪುತ್ರನಾಗಿದ್ದಾನೆ. ಈ ನಡುವೆ ಅಂಕಿತಾ ಹತ್ಯೆಯ ಬಳಿಕ ಆಕೆಯ ಸಂಬಂಧಿಯ ವಿರುದ್ಧ ಆಕ್ಷೇಪಾರ್ಹ ಪೋಸ್ಟ್‌ವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದ ಆರೆಸ್ಸೆಸ್‌ನ ಪದಾಧಿಕಾರಿಯೋರ್ವನ ವಿರುದ್ದ ಪೊಲೀಸರು ಬುಧವಾರ ದೇಶದ್ರೋಹ ಮತ್ತು ಜಾತಿ ವೈಷಮ್ಯವನ್ನು ಹರಡುತ್ತಿರುವ ಆರೋಪದಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News