ತನಿಖೆ ನಡೆಸಿ ತಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಸಚಿವ ಎಸ್.ಅಂಗಾರ

Update: 2022-09-29 16:12 GMT

ಕುಂದಾಪುರ, ಸೆ.29: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಜಟ್ಟಿ ಕುಸಿದ ಪ್ರಕರಣವನ್ನು ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಿ ವರದಿ ಪಡೆದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಮೀನುಗಾರಿಕಾ ಹಾಗೂ ಬಂದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.

ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿದ ಪ್ರದೇಶಕ್ಕೆ ಗುರುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತಿದ್ದರು. ಗಂಗೊಳ್ಳಿಯ ಮೀನುಗಾರಿಕಾ ಬಂದರಿನ ಜೆಟ್ಟಿ ಕುಸಿತ ಪ್ರಕರಣದಿಂದ ಸರ್ಕಾರಕ್ಕೆ ಅವಮಾನವಾಗಿದೆ. ಜೆಟ್ಟಿ ಕುಸಿತದಿಂದ ಮೀನುಗಾರಿಕೆಗೆ ತೊಂದರೆಯಾಗ ದಂತೆ ಆದಷ್ಟು ಶೀಘ್ರ ಜೆಟ್ಟಿ ಪುನರ್ ನಿರ್ಮಾಣ ಮಾಡಲು ಸರಕಾರ ಕ್ರಮಕೈಗೊಳ್ಳಲಿದೆ ಎಂದರು.

ಸೆಂಟರ್ ಇನ್ಸಿಟಿಟ್ಯೂಟ್ ಆಫ್ ಕೋಸ್ಟಲ್ ಇಂಜಿನಿಯರಿಂಗ್ ಫಾರ್ ಫಿಶರಿ ಸಂಸ್ಥೆ ನೀಡಿದ ವಿನ್ಯಾಸದಂತೆ ಈ ಜಟ್ಟಿ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಈ ವಿನ್ಯಾಸದಂತೆ ಸಂಬಂಧಪಟ್ಟ ಇಂಜಿನಿಯರ್‌ಗಳು ಈ ಕಾಮಗಾರಿ ನಡೆಸಿ ದ್ದಾರೆಯೇ ಎಂಬುದರ ಬಗ್ಗೆ ವಿಶೇಷವಾಗಿ ತನಿಖೆ ನಡೆಸಲಾಗುವುದು. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ತಪಿತಸ್ಥರ ವಿರುದ್ಧ ಕಟ್ಟು ನಿಟ್ಟಿನ ಕ್ರಮವನ್ನು ಸರಕಾರ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು.

ಒಟ್ಟು 12 ಕೋಟಿ ವೆಚ್ಚದ ಈ ಕಾಮಗಾರಿಗೆ ಈವರೆಗೆ 10ಕೋಟಿ ರೂ. ಬಿಡುಗಡೆಯಾಗಿದೆ. ಯಾವ ಹಂತದಲ್ಲಿ ಎಷ್ಟು ಬಿಲ್ ಆಗಿದೆ ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತೇನೆ. ಒಟ್ಟು 370 ಮೀಟರ್ ಉದ್ದದ ಈ ಕಾಮಗಾರಿ ಯಲ್ಲಿ 220 ಮೀಟರ್ ಕಾಮಗಾರಿ ಪೂರ್ಣಗೊಂಡಿದ್ದು, 150 ಮೀಟರ್ ಬಾಕಿ ಇದೆ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆ ಕುರಿತ ಸಂಪೂರ್ಣ ತಾಂತ್ರಿಕ ಮಾಹಿತಿಯನ್ನು ಪಡೆದು ಕೊಂಡು ಪರಿಶೀಲನೆ ನಡೆಸಲಾಗುವುದು. ಇದರಲ್ಲಿ ಲೋಪ ಕಂಡುಬಂದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಜೆಟ್ಟಿ ಕುಸಿತ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸಿಕೊಡಬೇಕು ಎಂಬ ಸ್ಥಳೀಯ ಮೀನುಗಾರರ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸೋಮವಾರ ಈ ಬಗ್ಗೆ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಕರೆದು, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮುಂದೆ ಯಾವುದೇ ಗುತ್ತಿಗೆದಾರರು ಕಾಮಗಾರಿಗಳನ್ನು ನಡೆಸುವಾಗ ಕಾಮಗಾರಿಯ ಗುಣಮಟ್ಟದ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಕಳಪೆ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು ಎಂದ ಅವರು, ಕೆಲವೊಂದು ಕಾಮಗಾರಿಯಲ್ಲಿ ತಾಂತ್ರಿಕ ಮಾಹಿತಿ ಯನ್ನು ಅನುಭವ ಇರುವ ಸ್ಥಳೀಯ ಮೀನುಗಾರ ರಿಂದಲೂ ಪಡೆಯುವುದು ಅಗತ್ಯವಾಗಿರುತ್ತದೆ. ಅಂತಹ ಕಾಮಗಾರಿ ಶಾಶ್ವತ ಹಾಗೂ ಹೆಚ್ಚು ಗುಣಮಟ್ಟ ದ್ದಾಗಿರುತ್ತದೆ. ಆ ದಿಕ್ಕಿನಲ್ಲಿ ಅಧಿಕಾರಿಗಳು ಗಮನ ಕೊಡುವ ಕಾರ್ಯ ಮಾಡಬೇಕು ಎಂದರು.

ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ., ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯ, ಬಂದರು ಮತ್ತು ಮೀನುಗಾರಿಕೆ ಇಲಾಖೆ ಎಂಜಿನಿಯರ್ ಶ್ರೀನಿವಾಸ ಮೂರ್ತಿ, ಮೀನುಗಾರಿಕೆ ಇಲಾಖೆ ಅಪರ ನಿರ್ದೇಶಕ ಪಿ.ನಾಗರಾಜ್, ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಾದ ಗಣೇಶ, ಉದಯಕುಮಾರ್, ಸುಮಲತಾ, ದಿವಾಕರ ಖಾರ್ವಿ, ಉಪನಿರ್ದೇಶಕ ಕುಮಾರ ಸ್ವಾಮಿ, ಕುಂದಾಪುರ ಡಿವೈಎಸ್‌ಪಿ ಶ್ರೀಕಾಂತ್ ಮೊದಲಾದವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ಟ್ವೀಟ್ ಆರೋಪಕ್ಕೆ ಪ್ರತಿಕ್ರಿಯೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಂಗಾರ, ರಾಜಕೀಯಕ್ಕಾಗಿ ಸಿದ್ದರಾಮಯ್ಯ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಕಮೀಷನ್ ಪಡೆದಿದ್ದಾರೆ, ಎಷ್ಟು ಪಡೆದಿದ್ದಾರೆ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು. ಕಾಂಗ್ರೆಸ್ ಸರಕಾರದ ಅವಧಿ ಯಲ್ಲಿ ಕಮೀಷನ್ ವ್ಯವಹಾರ ನಡೆದಿಲ್ಲವೇ?  ಬಿಜೆಪಿ ಸರಕಾರದ ಅವಧಿಯಲ್ಲಿ ಆರೋಪ ಕೇಳಿ ಬಂದಾಗ ಅದರ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಸಹ ಕೈಗೊಳ್ಳಲಾಗಿದೆ. ಕಾಂಗ್ರೆಸ್ಸಿಗರು ಹತಾಶ ಭಾವನೆಯಿಂದ ಈ ರೀತಿಯ ಟೀಕೆ ಗಳನ್ನು ಮಾಡುತ್ತಿದ್ದು, ಸಿದ್ದರಾಮಯ್ಯ ಅವರು 40 ಪರ್ಸೆಂಟ್ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಈ ಪ್ರಶ್ನೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.

ಅಧಿಕಾರಿಗಳ ವಿರುದ್ಧ ಮೀನುಗಾರರ ಆಕ್ರೋಶ

ಕಳಪೆ ಕಾಮಗಾರಿಯಿಂದಾಗಿ ಮೀನುಗಾರರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇಲ್ಲಿ ಅಪೂರ್ಣ, ಅಸಮರ್ಪಕ ಕಾಮಗಾರಿಯಿಂದಾಗಿ ನಾವು ಭಟ್ಕಳ, ಮಲ್ಪೆಯಲ್ಲಿ ಬೋಟ್ ನಿಲ್ಲಿಸಿ, ಬರಬೇಕಾದ ಅನಿವಾರ್ಯತೆ ಯಿದೆ. ಎಂಜಿನಿಯರ್ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದಲೇ ಈ ಅವಘಢ ಉಂಟಾಗಿದ್ದು, ಇವರು ಮೀನುಗಾರರ ಜೀವದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಈಗ ಮಾಡಿರುವ ಕಾಮಗಾರಿಯಲ್ಲಿಯೂ ನಮಗೆ ನಂಬಿಕೆಯಿಲ್ಲ. ಅಲ್ಲಿ ನಿಲ್ಲುವ ಧೈರ್ಯವೂ ಇಲ್ಲ ಎಂದು ಮೀನುಗಾರ ಮುಖಂಡರಾದ ರಮೇಶ್ ಕುಂದರ್, ರಾಮಪ್ಪಖಾರ್ವಿ, ಯಶವಂತ್ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News