ಹೃದಯ ದಿನದ ಪ್ರಯುಕ್ತ ಕೆಎಂಸಿಯಲ್ಲಿ ‘ಜಾಗೃತಿ ಕಲಾ ಶಿಲ್ಪ’ ಅನಾವರಣ

Update: 2022-09-29 16:46 GMT

ಮಣಿಪಾಲ, ಸೆ.29: ಪ್ರತಿ ವರ್ಷ ಸೆ.29ನ್ನು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಹೃದಯ ರಕ್ತನಾಳದ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಅಂಗವಾಗಿ ಇಂದು ಮಣಿಪಾಲದ ಕೆಎಂಸಿಯಲ್ಲಿ ರಚಿಸಲಾದ ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪದ ಅನಾವರಣ ಮಾಡಲಾಯಿತು.

ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ವಿಭಾಗ , ಹೃದಯರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗ  ಮತ್ತು ಸಮುದಾಯ ವೈದ್ಯಕೀಯ ವಿಭಾಗಗಳ ಸಂಯುಕ್ತ ಆಶ್ರಯ ದಲ್ಲಿ  ಇಂದು ಹೃದಯದ ಆರೋಗ್ಯದ ಅರಿವು ಮೂಡಿಸಲು  ಹೃದಯ ಆರೋಗ್ಯ ಜಾಗೃತಿ ಕಲಾ ಶಿಲ್ಪದ ಅನಾವರಣ ಮತ್ತು ಸಾರ್ವಜನಿಕರಿಗೆ ಉಚಿತ ಹೃದಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಬಾರಿಯ ವಿಶ್ವ ಹೃದಯ ದಿನ-2022ರ ಘೋಷ ವಾಕ್ಯ ‘ಪ್ರತಿ ಹೃದಯಕ್ಕಾಗಿ ಹೃದಯವನ್ನು ಬಳಸಿ’. 

ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕರಾದ ಅಬ್ದುಲ್ ಅಹ್ಮದ್ ಇವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮನ್ನು ಅವಲಂಬಿತರಾಗಿ ಬಹಳಷ್ಟು ಮಂದಿ ನಮ್ಮ ಕುಟುಂಬದಲ್ಲಿ ಇರುತ್ತಾರೆ.  ಅಕಾಲಿಕ, ಅಕಸ್ಮಿಕ ಮರಣ ಸಾಕಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ನಮ್ಮ ಹೃದಯ ತಪಾಸಣೆ ಮಾಡುವುದರ ಮೂಲಕ ನಮ್ಮ ಹೃದಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.

ಕೆಎಂಸಿಯ ಡೀನ್ ಡಾ. ಶರತ್‌ಕುಮಾರ್ ರಾವ್ ಹೃದಯ ಆರೋಗ್ಯ ತಪಾಸಣಾ ಪ್ಯಾಕೇಜುಗಳನ್ನು ಬಿಡುಗಡೆ ಮಾಡಿ ಮಾತನಾಡಿ ಹೃದಯ ವ್ಯಕ್ತಿ ಜೀವಂತವಾಗಿರಲು ಒಂದು ಯಂತ್ರದ ತರಹ ಕೆಲಸ ಮಾಡುತ್ತದೆ. ಇದು ದೇಹದ  ಎಲ್ಲ ಜೀವಕೋಶಗಳಿಗೆ  ರಕ್ತ, ಆಮ್ಲಜನಕ ಮತ್ತು  ಪೌಷ್ಟಿಕಾಂಶಗಳನ್ನು ಪೂರೈಕೆ ಮಾಡುವುದರೊಂದಿಗೆ ರಕ್ತವನ್ನು ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತದೆ.ಇಂತಹ ಬಹು ಅಮೂಲ್ಯ ಅಂಗವನ್ನು ಆರೋಗ್ಯವಾಗಿಟ್ಟು ಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ  ಮಾತನಾಡಿದ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಸಾರ್ವಜನಿಕರ ಬೇಡಿಕೆ ಮೇರೆಗೆ ನಾವು ವಿಶೇಷ ಹೃದಯ ತಪಾಸಣೆ ಪ್ಯಾಕೇಜ್ ಅನ್ನು 3000 ರೂ. ಮತ್ತು ಸುಧಾರಿತ ಹೃದಯ ತಪಾಸಣೆ ಪ್ಯಾಕೇಜ್ ೪೦೦೦ರೂ.ಗೆ ಪರಿಚಯಿಸುತ್ತಿದ್ದೇವೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳ ಬೇಕು ಎಂದರು.

ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್,  ಮಲ್ಪೆಯ ಕರಾವಳಿ ಕಾವಲು ಪಡೆಯ ಪೊಲೀಸ್ ನಿರೀಕ್ಷಕ ಡಾ ಶಂಕರ್ ಎಸ್.ಕೆ ಉಪಸ್ಥಿತರಿದ್ದರು. ವಿಶ್ವ ಹೃದಯ ದಿನದ ಕುರಿತು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ಮಾತನಾಡಿದರು. ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಪದ್ಮಕುಮಾರ್ ಸ್ವಾಗತಿಸಿದು.ಹೃದಯನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಕಾಮತ್ ವಂದಿಸಿದರು. ಡಾ. ಈಶ್ವರಿ ಆಚಾರ್ ಕಾರ್ಯಕ್ರಮ ನಿರ್ವಹಿಸಿದರು.

ಶಿಶ್ರನಾಥ್ ಮಣಿಪಾಲ ಮತ್ತು ರವಿ ಹಿರೇಬೆಟ್ಟು ಪರಿಸರ ಸ್ನೇಹಿ ವಸ್ತುಗಳಿಂದ ಹೃದಯ ದಿನದ ಸಂದೇಶ ಸಾರುವ ಶಿಲ್ಪವನ್ನು ತಯಾರಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಉಚಿತವಾಗಿ, ಮಧುಮೇಹ, ರಕ್ತದ ಒತ್ತಡ, ಇಸಿಜಿ ಮತ್ತು ವೈದ್ಯರೊಂದಿಗೆ ಸಮಾಲೋಚನೆ  ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News