×
Ad

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ: ನಾಮಪತ್ರ ಸಲ್ಲಿಸಿದ ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ

Update: 2022-09-30 12:04 IST

ಹೊಸದಿಲ್ಲಿ, ಸೆ. 30: ಮುಂದಿನ ತಿಂಗಳು ನಡೆಯಲಿರುವ ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಪಕ್ಷದ ನಾಯಕರಾದ ಶಶಿ ತರೂರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.                 

ಕಾಂಗ್ರೆಸ್‌ನ ನಾಯಕರಾದ ಎ.ಕೆ. ಆ್ಯಂಟನಿ, ಅಶೋಕ್ ಗೆಹ್ಲೋಟ್, ಅಂಬಿಕಾ ಸೋನಿ, ಮುಕುಲ್ ವಾಸ್ನಿಕ್, ಆನಂದ್ ಶರ್ಮಾ, ಅಭಿಷೇಕ್ ಸಿಂಘ್ವಿ, ಅಜಯ್ ಮಾಕನ್, ಭೂಪಿಂದರ್ ಹೂಡಾ, ದಿಗ್ವಿಜಯ್ ಸಿಂಗ್ ಹಾಗೂ ತಾರೀಕ್ ಅಹ್ಮದ್ ಅವರು ಖರ್ಗೆ ಅವರನ್ನು ಪ್ರಸ್ತಾವಿಸಿ ಸಹಿ ಹಾಕಿದ್ದಾರೆ.

ತಾವು ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಗೆಹ್ಲೋಟ್ ಹಾಗೂ ಸಿಂಗ್ ಅವರು ಆರಂಭದಲ್ಲಿ ಹೇಳಿದ್ದರು. ಆದರೆ, ಅನಂತರ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಸಂಸತ್ತಿನಲ್ಲಿ ಪ್ರತಿಪಕ್ಷದ ನಾಯಕರು ಕೂಡ ಆಗಿರುವ ಖರ್ಗೆ ಶುಕ್ರವಾರ ಅಪರಾಹ್ನ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ‘‘ಒಬ್ಬ ವ್ಯಕ್ತಿ, ಒಂದು ಹುದ್ದೆ’’ ನಿಯಮ ಇರುವುದರಿಂದ ಖರ್ಗೆ ಅವರು ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ಶುಕ್ರವಾರ ಬೆಳಗ್ಗೆ ತರೂರ್ ಅವರು ತನ್ನ ನಾಮಪತ್ರವನ್ನು ಹೊಸದಿಲ್ಲಿಯಲ್ಲಿರುವ ಕಾಂಗ್ರೆಸ್‌ನ ಕೇಂದ್ರ ಕಚೇರಿಯಲ್ಲಿರುವ ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ಟ್ರಿ ಅವರಿಗೆ ಸಲ್ಲಿಸಿದ್ದಾರೆ. ತರೂರ್ ಅವರ ಅಭ್ಯರ್ಥನವನ್ನು ಪ್ರಸ್ತಾವಿಸಿದವರಲ್ಲಿ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಇದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತರೂರ್ ಅವರು, ಖರ್ಗೆ ಅವರು ನಾಮಪತ್ರ ಸಲ್ಲಿಸಿರುವುದನ್ನು ಸ್ವಾಗತಿಸಿದರು. ಅಲ್ಲದೆ, ಹೆಚ್ಚು ಸಂಖ್ಯೆ ಅಭ್ಯರ್ಥಿಗಳು ಪಕ್ಷಕ್ಕೆ ಲಾಭ ಎಂದರು.

ತನಗೆ ಬೆಂಬಲ ನೀಡಿದ ದೇಶಾದ್ಯಂತ ಸಾವಿರಾರು ಕಾರ್ಮಿಕರನ್ನು ನಿರಾಶೆಗೊಳಿಸಲು ಬಯಸುವುದಿಲ್ಲ. ಆದುದರಿಂದ ತಾನು ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತರೂರ್ ಹೇಳಿದ್ದಾರೆ.

ತರೂರ್ ಅಲ್ಲದೆ, ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆ.ಎನ್. ತ್ರಿಪಾಠಿ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತನ್ನ ಅಭ್ಯರ್ಥನವನ್ನು ಘೋಷಿಸಿದ್ದರು. ಖರ್ಗೆ ಘೋಷಿಸಿದ ಕೂಡಲೇ ‘‘ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ’’ ಎಂದು ಗುರುವಾರ ಹೇಳಿದ್ದ ದಿಗ್ವಿಜಯ ಸಿಂಗ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆದರು. ಅನಂತರ ಅವರು, ‘‘ತಾನು ಖರ್ಗೆ ಅವರನ್ನು ಬೆಂಬಲಿಸುವುದಾಗಿ’’ ಘೋಷಿಸಿದರು.

ತಾನು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ಕಳೆದ ವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹೇಳಿದ್ದರು. ಆದರೆ, ಗುರುವಾರ ತಾನು ಸ್ಪರ್ಧೆಯಿಂದ ಹೊರಗುಳಿಯುವುದಾಗಿ ತಿಳಿಸಿದ್ದರು. ದಿಲ್ಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಅವರು ಹೇಳಿಕೆ ನೀಡಿದ್ದರು.
ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ಅಕ್ಟೋಬರ್ 17ರಂದು ನಡೆಯಲಿದೆ. ಎರಡು ದಿನಗಳ ಬಳಿಕ ಫಲಿತಾಂಶ ಘೋಷಣೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News