ಅದಾನಿ ಬಂದರಿನ ದ್ವಾರದಲ್ಲಿ ಪ್ರತಿಭಟನಾಕಾರರು ನಿರ್ಮಿಸಿದ ತಡೆಗಳ ತೆರವಿಗೆ ಸರಕಾರಕ್ಕೆ ಸೂಚಿಸಿದ ಕೇರಳ ಹೈಕೋರ್ಟ್

Update: 2022-09-30 12:45 GMT

ತಿರುವನಂತಪುರಂ:  ನಿರ್ಮಾಣ ಹಂತದಲ್ಲಿರುವ ವಿಝಿಂಜಂ ಬಂದರಿನ ಪ್ರವೇಶ ಸ್ಥಳದ ಮುಂದೆ  ಪ್ರತಿಭಟನಾಕಾರರು ಇರಿಸಿರುವ ತಡೆಗಳನ್ನು ತೆರೆವುಗೊಳಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ವಾಹನಗಳ ಓಡಾಟಕ್ಕೆ ಈ ಸ್ಥಳದಲ್ಲಿ ಯಾವುದೇ ಅಡೆತಡೆಗಳಿರದಂತೆ ನೋಡಿಕೊಳ್ಳಬೇಕೆಂದು ಜಸ್ಟಿಸ್ ಅನು ಶಿವರಾಮನ್ ಆದೇಶಿಸಿದ್ದಾರೆ. ಪ್ರತಿಭಟನಾಕಾರರು ನಿರ್ಮಿಸಿದ್ದ ಶೆಡ್‍ಗಳು ಇನ್ನೂ ಅದೇ ಸ್ಥಳದಲ್ಲಿವೆ ಹಾಗೂ ಪ್ರವೇಶದ್ವಾರದಲ್ಲಿ ತಡೆಗಳಿವೆ ಎಂದು ನ್ಯಾಯಾಂಗ ನಿಂದನೆ ದೂರನ್ನು ಅದಾನಿ ಪೋರ್ಟ್ಸ್ ದಾಖಲಿಸಿತ್ತು.

ಆದರೆ  ಬಂದರಿನಲ್ಲಿ ವಾಹನಗಳಿಗೆ ಈಗ ಅಡ್ಡಿಪಡಿಸಲಾಗುತ್ತಿಲ್ಲ ಎಂದು ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಆಕ್ಷೇಪಿಸಿ ರಾಜ್ಯ ಸರಕಾರ ಹೇಳಿತ್ತು.

ವಾಹನಗಳಿಗೆ ತಡೆ ಹೇರದಂತೆ ಹಾಗೂ ಪ್ರವೇಶದ್ವಾರದಲ್ಲಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವಂತೆ ಸೂಚಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ನಿಗದಿಪಡಿಸಿದೆ.

ಇದಕ್ಕೂ ಮುಂಚೆ ಆಗಸ್ಟ್ 29ರ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ್ದ ನ್ಯಾಯಾಲಯ, ವಿಝಿಂಜಮ್ ಬಂದರು ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ ಹಾಗೂ ಯೋಜನೆ ವಿರುದ್ಧ ಇರುವ ಯಾವುದೇ ದೂರುಗಳನ್ನು ಸೂಕ್ತ ವೇದಿಕೆಗಳ ಮುಂದಿಡಬೇಕು ಎಂದು ಹೇಳಿತ್ತಲ್ಲದೆ ಪ್ರತಿಭಟನೆಯು ಪ್ರಗತಿಯಲ್ಲಿರುವ ಯೋಜನೆ ಕಾಮಗಾರಿಯನ್ನು ಬಾಧಿಸಬಾರದು ಎಂದೂ ಸೂಚಿಸಿತ್ತು.

ಪ್ರತಿಭಟನಾಕಾರರಿಂದ ರಕ್ಷಣೆ ಕೋರಿ ಅದಾನಿ ಪೋರ್ಟ್ಸ್‌ ಆಗಸ್ಟ್ 25 ರಂದು ಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ತನ್ನ ಸಿಬ್ಬಂದಿಯ ಜೀವಕ್ಕೆ ಅಪಾಯವೊಡ್ಡಿವೆ ಹಾಗೂ ಪೊಲೀಸ್ ಮತ್ತು ಸರಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಅದು ದೂರಿತ್ತು.

ಮುಲ್ಲೂರು ಸಮೀಪ ಬಂದರು ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಹಾಗೂ ಈ ಬಹುಕೋಟಿ ಯೋಜನೆಯು ಕರಾವಳಿ ತೀರಕ್ಕೆ ಉಂಟು ಮಾಡಬಹುದಾದ ಪರಿಣಾಮ ಕುರಿತು ಅಧ್ಯಯನ ನಡೆಸಬೇಕು ಎಂಬ ಬೇಡಿಕೆ ಸಹಿತ ಏಳು ಅಂಶಗಳ ಬೇಡಿಕೆಗಳನ್ನು ಮುಂದಿರಿಸಿ ದೊಡ್ಡ ಸಂಖ್ಯೆಯ ಸ್ಥಳೀಯ ಜನರು ಕಳೆದ ವಾರದಿಂದ ಪ್ರತಿಭಟಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News