ನವರಾತ್ರಿಗೆ ಲೌಡ್‌ಸ್ಪೀಕರ್, ಡಿಜೆ ಅಗತ್ಯವಿಲ್ಲ: ಬಾಂಬೆ ಹೈಕೋರ್ಟ್‌

Update: 2022-09-30 14:43 GMT

ಹೊಸದಿಲ್ಲಿ, ಸೆ.30: ಡಿಜೆ, ಲೌಡ್ಸ್ಪೀಕರ್ಗಳಂತಹ ಆಧುನಿಕ ಧ್ವನಿ ವ್ಯವಸ್ಥೆಗಳನ್ನು ಬಳಸದೆಯೇ ನವರಾತ್ರಿ ಹಬ್ಬವನ್ನು ಅಪ್ಪಟ ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸಬಹುದಾಗಿದೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಿಸಿದೆ. ನಾಗಪುರದ ಮೂಲದ ನಿವಾಸಿಗಳ ಸಂಘಟನೆಗೆ ಸೆಪ್ಟೆಂಬರ್ 26ರಂದು ನಗರದ ಮೌನ ವಲಯ (ಸದ್ದುಗದ್ದಲ ನಿಷೇಧಿತ ಪ್ರದೇಶ)ದಲ್ಲಿ ನವರಾತ್ರಿ ಹಬ್ಬವನ್ನು ಆಚರಿಸಲು ಅನುಮತಿ ನೀಡಿದ ಸಂದರ್ಭದಲ್ಲಿ ಅದು ಈ ಅನಿಸಿಕೆಯನ್ನು ವ್ಯಕ್ತಪಡಿಸಿದೆ.

ಒಂದು ವೇಳೆ ಭಕ್ತಾದಿಗಳಿಗೆ ಇತರರಿಂದ ಅಥವಾ ಸ್ವತಃ ಭಕ್ತಾದಿಗಳೇ ಇತರರಿಗೆ ತೊಂದರೆಯುಂಟಾದಲ್ಲಿ, ಆ ಪ್ರದೇಶದಲ್ಲಿ ನವರಾತ್ರಿಯನ್ನು ಆಚರಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸುನೀಲ್ ಶುಕ್ಕರೆ ಹಾಗೂ ಗೋವಿಂದ ಸನಪ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
 
‘‘ನವರಾತ್ರಿಯಲ್ಲಿ ಶಕ್ತಿಯ ಆರಾಧನೆ ನಡೆಸಲಾಗುತ್ತದೆ. ಏಕಾಗ್ರ ಚಿತ್ತದಿಂದ ಯಾವುದೇ ಅಳುಕಿಲ್ಲದೆ, ಯಾವುದೇ ಅಡಚಣೆಯಿಲ್ಲದೆ ಮತ್ತು ಇತರರಿಗೂ ತೊಂದರೆಯಾಗದಂತೆ ಆರಾಧನೆ ನಡೆಸಿದರೆ ಮಾತ್ರವೇ ಶಕ್ತಿ ಆರಾಧನೆ ಪರಿಣಾಮಕಾರಿಯಾಗುತ್ತದೆ’’ ಎಂದು ನ್ಯಾಯಪೀಠ ಅಭಿಪ್ರಾಯಿಸಿತು.
  
ಒಂದು ವೇಳೆ ಯಾವುದೇ ಭಕ್ತನು, ಇತರರಿಗೆ ಮುಜುಗರ ಅಥವಾ ಅಡಚಣೆಯುಂಟು ಮಾಡಿದಲ್ಲಿ ಪ್ರತಿಯಾಗಿ ಇತರರಿಂದಲೂ ಅದೇ ರೀತಿಯ ಕೃತ್ಯಗಳು ನಡೆಯುವ ಸಾಧ್ಯತೆಯಿರುತ್ತದೆ’’ ಎಂದವರು ಹೇಳುತ್ತಾರೆ.

ಅತ್ಯಂತ ಕಾಳಜಿಯಿಂದ ನವರಾತ್ರಿ ಉತ್ಸವದ ಆಚರಣೆಯನ್ನು ಮಾಡಬೇಕಾಗಿದೆ. ತನ್ನ ಕೃತ್ಯದಿಂದ ಶಿಸ್ತು ಹಾಗೂ ಹಬ್ಬದ ಪಾವಿತ್ರಕ್ಕೆ ಹಾನಿಯಾಗದಂತೆ ಪ್ರತಿಯೊಬ್ಬ ಭಕ್ತನೂ ನೋಡಿಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News