ಹೈಕಮಾಂಡ್‌ ಸಂಸ್ಕೃತಿಯನ್ನು ಬದಲಾಯಿಸುತ್ತೇನೆ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ಅಭ್ಯರ್ಥಿ ಶಶಿ ತರೂರ್‌

Update: 2022-09-30 14:56 GMT
‌Photo: Twitter/ShashiTharoor

ಹೊಸದಿಲ್ಲಿ: ಕಾಂಗ್ರೆಸ್‌ನಲ್ಲಿನ ಅವ್ಯವಸ್ಥೆಗೆ ಅಧಿಕಾರ ವಿಕೇಂದ್ರೀಕರಣವೇ ಉತ್ತರ ಎಂದು ಪಕ್ಷದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಶಿ ತರೂರ್‌ ಹೇಳಿದ್ದಾರೆ. ಇಂದು ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮುಖ್ಯಸ್ಥರಾಗಿ ಕಾಂಗ್ರೆಸ್ ಬಗ್ಗೆ ತಮ್ಮ ದೃಷ್ಟಿಕೋನ ಏನಿದೆ ಅನ್ನುವುದನ್ನು ವಿವರಿಸಿದ್ದು, ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ಬದಲಾಯಿಸುತ್ತೇನೆ ಎಂದರು.

"ನಿರಂತರವಾಗಿ ದಿಲ್ಲಿಗೆ (ಹೈಕಮಾಂಡಿಗೆ) ವಿಷಯಗಳನ್ನು ಉಲ್ಲೇಖಿಸುವ" ಅಭ್ಯಾಸವನ್ನು ಸಮಸ್ಯೆ ಎಂದು ಗುರುತಿಸಿದ ಅವರು, ಕಾಂಗ್ರೆಸ್ ಅಧ್ಯಕ್ಷರು ನಿರ್ಧರಿಸುತ್ತಾರೆ ಎಂದು ಒಂದೇ ವಾಕ್ಯದಲ್ಲಿ ಪಕ್ಷದ ನಿರ್ಣಯಗಳನ್ನು ಅಂಗೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಆಂತರಿಕ ಚುನಾವಣೆ ಮತ್ತು ಸ್ಥಿರ ನಾಯಕತ್ವಕ್ಕಾಗಿ ಒತ್ತಾಯಿಸಿ ಸೋನಿಯಾ ಗಾಂಧಿಗೆ ಪತ್ರ ಬರೆದ 'ಜಿ-23' ಭಿನ್ನಮತೀಯರ ಭಾಗವಾಗಿ, ಪಕ್ಷದ ಉನ್ನತ ಹುದ್ದೆಗೆ ಶಶಿ ತರೂರ್‌ ನಾಮಪತ್ರ ಸಲ್ಲಿಸಿದ್ದಾರೆ. 

ಮಲ್ಲಿಕಾರ್ಜುನ ಖರ್ಗೆ ಅವರನ್ನು "ಅಧಿಕೃತ" ಗಾಂಧಿ ಬೆಂಬಲಿತ ಅಭ್ಯರ್ಥಿ, ಯಥಾಸ್ಥಿತಿಯ ಅಭ್ಯರ್ಥಿ ಎಂದು ಕರೆದ ಶಶಿ ತರೂರ್‌ , ತಾವು ಹೊಸ ದೃಷ್ಟಿಕೋನ ಮತ್ತು ವಿಧಾನವನ್ನು ತರುವುದಾಗಿ ಹೇಳಿದರು.

"ನೀವು ಪಕ್ಷದಲ್ಲಿ ಬದಲಾವಣೆ ಮತ್ತು ಪ್ರಗತಿಯನ್ನು ಬಯಸಿದರೆ, ನೀವು ನನಗೆ ಮತ ನೀಡಿ" ಎಂದು ಕರೆ ನೀಡಿದ ಅವರು, ತಳಮಟ್ಟದಲ್ಲಿ ಕೆಲಸ ಮಾಡುವ ಜನರಿಗೆ ಅಧಿಕಾರ ನೀಡಲು ಯೋಜಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಯಾವುದೇ ಕೆಟ್ಟ ಗುಣವಿಲ್ಲ ಎಂದು ಶಶಿ ತರೂರ್ ಹೇಳಿದ್ದು, ಅವರನ್ನು "ಕಾಂಗ್ರೆಸ್‌ನ ಭೀಷ್ಮ ಪಿತಾಮಹ" ಎಂದು ಕರೆದಿದ್ದಾರೆ. "ನಾವು ಪ್ರತಿಸ್ಪರ್ಧಿಗಳಲ್ಲ, ನಾವು ಸಹೋದ್ಯೋಗಿಗಳು" ಎಂದು ಅವರು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿ ಅಧಿಕಾರ ವಿಕೇಂದ್ರೀಕರಣದ ವಿಚಾರವನ್ನು ಮುನ್ನೆಲೆಗೆ ತಂದಿದ್ದೇನೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News